ಮಂಗಳೂರು: ಕೆಲಸ ಮತ್ತು ಕುಟುಂಬದ ಜವಾಬ್ದಾರಿಗಳ ನಡುವೆ ಕಳೆದ 6 ವರ್ಷಗಳಿಂದ ಮುಂದೂಡಲ್ಪಡುತ್ತಿದ್ದ ಕನಸೊಂದನ್ನು ಮಂಗಳೂರಿನ ನಾಲ್ವರು ಸ್ನೇಹಿತರು ಆಟೋ ರಿಕ್ಷಾದಲ್ಲೇ ಲಡಾಕ್ ತಲುಪುವ ಮೂಲಕ ನನಸು ಮಾಡಿಕೊಂಡಿದ್ದಾರೆ.
ದೇರಳಕಟ್ಟೆಯಲ್ಲಿ ಆಟೋ ಚಾಲಕರಾಗಿದ್ದ ಅಫ್ರೀದ್ (27), ಹಸನ್ (27), ಸಾದಿಕ್ (26) ಮತ್ತು ಅಜೀಮ್ (30) ಈ ಸಾಹಸಯಾನ ಕೈಗೊಂಡವರಾಗಿದ್ದಾರೆ. ಅಕ್ಟೋಬರ್ 10ರಂದು ಮಂಗಳೂರಿನಿಂದ ಪ್ರಯಾಣ ಆರಂಭಿಸಿದ್ದ ಈ ತಂಡ, ಮನಾಲಿ ಮೂಲಕ ಕಾಶ್ಮೀರ ತಲುಪಿ, ಅ.24ರಂದು ಲಡಾಕ್ ತಲುಪುವಲ್ಲಿ ಯಶಸ್ವಿಯಾಗಿದೆ.
ಯಾತ್ರೆಗಾಗಿ ಸ್ನೇಹಿತರೊಬ್ಬರ ಆಟೋಗೆ 1 ಲಕ್ಷ ರೂ. ವೆಚ್ಚ ಮಾಡಿ ಮಾರ್ಪಾಡು ಮಾಡಲಾಗಿತ್ತು. ಹಳದಿ ಬೋರ್ಡ್ ಅನ್ನು ವೈಟ್ ಬೋರ್ಡ್‌ಗೆ ಬದಲಾಯಿಸಿ, ಎಲ್‌ಪಿಜಿ ಮತ್ತು ಪೆಟ್ರೋಲ್ ಎರಡರಲ್ಲೂ ಚಲಿಸುವಂತೆ ರೂಪಿಸಲಾಗಿತ್ತು. ಸುದೀರ್ಘ ಪಯಣಕ್ಕೆ 1.5 ಲಕ್ಷ ರೂ. ಬಜೆಟ್ ಕಾಯ್ದಿರಿಸಿದ್ದ ಸ್ನೇಹಿತರು, ಮಾರ್ಗಮಧ್ಯೆ ಸಣ್ಣಪುಟ್ಟ ರಿಪೇರಿಗಳನ್ನು ತಾವೇ ನಿರ್ವಹಿಸಿಕೊಂಡು ಸಾಗಿದ್ದಾರೆ. ರಾಜಸ್ಥಾನದ ಮೂಲಕ ಮಂಗಳೂರಿಗೆ ಮರಳಲಿರುವ ಈ ನಾಲ್ವರು, ಮುಂದಕ್ಕೆ ಕನ್ಯಾಕುಮಾರಿಗೂ ಆಟೋದಲ್ಲೇ ತೆರಳುವ ಯೋಜನೆ ಹೊಂದಿದ್ದಾರೆ.


