ಮಂಗಳೂರು: ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸರಣಿ ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ ಗ್ಯಾಂಗ್ ಒಂದನ್ನು ಮಂಗಳೂರು ದಕ್ಷಿಣ (ಪಾಂಡೇಶ್ವರ) ಪೊಲೀಸರು ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅಪ್ರಾಪ್ತರು ಸೇರಿದಂತೆ ಒಟ್ಟು 7 ಜನರನ್ನು ವಶಕ್ಕೆ ಪಡೆದಿರುವ ಪೊಲೀಸರು, 4.50 ಲಕ್ಷ ರೂಪಾಯಿ ಮೌಲ್ಯದ 9 ಬೈಕ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳು: ಮೂಡುಶೆಡ್ಡೆಯ ಮಹಮ್ಮದ್ ಸಿಯಾಮ್ (19), ಜೋಕಟ್ಟೆಯ ಮುಹಮ್ಮದ್ ನಾಸೀಫ್ ಅಲಿಯಾಸ್ ನಸೀಫ್ (19), ಮೂಡುಶೆಡ್ಡೆಯ ಮೊಹಮ್ಮದ್ ರಾಹೀಲ್ (18) ಮತ್ತು ಸದಾಶಿವ ನಗರದ ನಿಖಿಲ್ (18) ಬಂಧಿತ ಆರೋಪಿಗಳು. ಇವರೊಂದಿಗೆ ಕಾನೂನು ಸಂಘರ್ಷಕ್ಕೊಳಗಾದ ಮೂವರು ಬಾಲಕರನ್ನೂ ವಶಕ್ಕೆ ಪಡೆಯಲಾಗಿದೆ.
ಪ್ರಕರಣದ ಹಿನ್ನೆಲೆ: ಅಕ್ಟೋಬರ್ 12 ರಿಂದ 22 ರ ಅವಧಿಯಲ್ಲಿ ವೆಲೆನ್ಸಿಯಾ ಜಂಕ್ಷನ್, ಜಪ್ಪು ಮಾರ್ಕೆಟ್, ಅತ್ತಾವರ ಕೆಎಂಸಿ ಆಸ್ಪತ್ರೆ ಬಳಿ, ಹೊಯಿಗೆ ಬಜಾರ್, ದೇರಳಕಟ್ಟೆ ಯೆನೆಪೋಯ ಆಸ್ಪತ್ರೆ ಹಾಗೂ ಕುತಾರ್ ಪಂಡಿತ್ ಹೌಸ್ ವ್ಯಾಪ್ತಿಯಲ್ಲಿ ಒಟ್ಟು 6 ಬೈಕ್ಗಳು ಕಳವಾಗಿದ್ದವು. ಈ ಕುರಿತು ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ 4 ಹಾಗೂ ಉಳ್ಳಾಲ ಠಾಣೆಯಲ್ಲಿ 2 ಪ್ರಕರಣಗಳು ದಾಖಲಾಗಿದ್ದವು. ತನಿಖೆಯ ವೇಳೆ ಆರೋಪಿಗಳು ತಮ್ಮ ಐಷಾರಾಮಿ ಜೀವನ ಶೈಲಿಗಾಗಿ ದುಬಾರಿ ಬೆಲೆಯ ದ್ವಿಚಕ್ರ ವಾಹನಗಳನ್ನೇ ಗುರಿಯಾಗಿಸಿಕೊಂಡು ಕದ್ದು, ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದುದು ಬೆಳಕಿಗೆ ಬಂದಿದೆ. ಕಳವು ಮಾಡಿದ್ದ 6 ಬೈಕ್ಗಳು ಹಾಗೂ ಕೃತ್ಯ ಎಸಗಲು ಬಳಸಿದ್ದ 3 ಬೈಕ್ಗಳು ಸೇರಿದಂತೆ ಒಟ್ಟು 9 ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತ ನಾಲ್ವರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಪೊಲೀಸ್ ತಂಡದ ಕಾರ್ಯಾಚರಣೆ: ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ರಾಘವೇಂದ್ರ ಬೈಂದೂರ್ ಅವರ ನೇತೃತ್ವದಲ್ಲಿ ಪಿಎಸ್ಐ ಮಾರುತಿ, ಕ್ರೈಂ ಸಿಬ್ಬಂದಿಗಳಾದ ಲಕ್ಷ್ಮಣ ಸಾಲೋಟಗಿ, ಪುಟ್ಟರಾಮ್, ಸಾಗರ ದೇವಕತ್ತಿ, ಆಂಜನೇಯ ಕೆ.ಎಸ್ ಹಾಗೂ ಠಾಣಾ ಸಿಬ್ಬಂದಿಯನ್ನೊಳಗೊಂಡ ವಿಶೇಷ ತಂಡ ಈ ಕಾರ್ಯಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.


