ರಾಜ್ಯದಲ್ಲಿ ಮುಂಬರುವ ಎಸ್ಎಸ್ಎಲ್ಸಿ ಹಾಗೂ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳ ವೇಳಾಪಟ್ಟಿಯಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದ್ದು, ಕೇಂದ್ರ ಸರ್ಕಾರದ ಜನಗಣತಿ ಕಾರ್ಯಾಚರಣೆಗೆ ಶಿಕ್ಷಕರನ್ನು ನಿಯೋಜಿಸಬೇಕಿರುವ ಹಿನ್ನೆಲೆಯಲ್ಲಿ ಪರೀಕ್ಷೆಗಳನ್ನು ಮುಂದೂಡುವಂತೆ ಮನವಿ ಸಲ್ಲಿಸಲಾಗಿದೆ.
ಕೇಂದ್ರ ಜನಗಣತಿ ಕಾರ್ಯಾಚರಣೆ ನಿರ್ದೇಶನಾಲಯವು ಈ ಕುರಿತು ಶಾಲಾ ಶಿಕ್ಷಣ ಇಲಾಖೆಗೆ ಅಧಿಕೃತ ಪತ್ರ ಬರೆದಿದೆ. ಜನಗಣತಿ ಕಾರ್ಯದಲ್ಲಿ ಶಿಕ್ಷಕರು ಭಾಗವಹಿಸಬೇಕಿರುವುದರಿಂದ ಪರೀಕ್ಷೆಗಳ ನಿರ್ವಹಣೆಗೆ ತೊಂದರೆಯಾಗದಂತೆ ವೇಳಾಪಟ್ಟಿಯನ್ನು ಬದಲಾಯಿಸುವಂತೆ ಮನವಿ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಪರೀಕ್ಷಾ ಮಂಡಳಿಯು ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸುವ ಸಾಧ್ಯತೆ ಇದೆ.
ಕೇಂದ್ರ ಸರ್ಕಾರದ ಯೋಜನೆಯಂತೆ ಜನಗಣತಿಯ ಎರಡನೇ ಹಂತದ ಕಾರ್ಯಾಚರಣೆ ಜನವರಿ 25ರಿಂದ ಫೆಬ್ರವರಿ 28ರವರೆಗೆ ನಡೆಯಲಿದೆ. ಬಳಿಕ ಮಾರ್ಚ್ 1ರಿಂದ 5ರವರೆಗೆ ಪರಿಷ್ಕರಣಾ ಕಾರ್ಯ ನಡೆಯಲಿದೆ. ಇದೇ ಅವಧಿಯಲ್ಲಿ ಪರೀಕ್ಷೆಗಳ ಸಿದ್ಧತೆ ಹಾಗೂ ನಿರ್ವಹಣೆಯೂ ಇರುವುದರಿಂದ ಶಿಕ್ಷಕರ ನಿಯೋಜನೆ ಸಮಸ್ಯೆಯಾಗುವ ಸಾಧ್ಯತೆ ಇದೆ.
ಈ ಹಿಂದೆ ಪ್ರಕಟಿಸಿದ್ದ ತಾತ್ಕಾಲಿಕ ವೇಳಾಪಟ್ಟಿ ಹೀಗಿದೆ:
ದ್ವಿತೀಯ ಪಿಯುಸಿ ಪರೀಕ್ಷೆ-1: ಫೆಬ್ರವರಿ 27ರಿಂದ ಮಾರ್ಚ್ 1
ದ್ವಿತೀಯ ಪಿಯುಸಿ ಪರೀಕ್ಷೆ-2: ಮೇ 3ರಿಂದ ಮೇ 15
ಎಸ್ಎಸ್ಎಲ್ಸಿ ಪರೀಕ್ಷೆ-1: ಮಾರ್ಚ್ 22ರಿಂದ ಏಪ್ರಿಲ್ 5
ಎಸ್ಎಸ್ಎಲ್ಸಿ ಪರೀಕ್ಷೆ-2: ಮೇ 24ರಿಂದ ಮೇ 31
ದ್ವಿತೀಯ ಪಿಯುಸಿ ಪರೀಕ್ಷೆ-1ರ ಆರಂಭದ ದಿನಾಂಕವನ್ನು ಮಾರ್ಚ್ 6, 2027ಕ್ಕೆ ಮರುನಿಗದಿಪಡಿಸುವಂತೆ ಮನವಿ ಮಾಡಲಾಗಿದೆ ಎನ್ನಲಾಗಿದೆ. ಈ ಕುರಿತು ಶಿಕ್ಷಣ ಇಲಾಖೆ ಹಾಗೂ ಪರೀಕ್ಷಾ ಮಂಡಳಿಯ ಅಧಿಕೃತ ನಿರ್ಧಾರ ಹೊರಬಂದ ಬಳಿಕ ಸ್ಪಷ್ಟ ಚಿತ್ರಣ ದೊರೆಯಲಿದೆ.


