ಉಡುಪಿ: ಬ್ರಹ್ಮಾವರ ತಾಲೂಕಿನ ಮಾಬುಕಳ ಸರ್ಕಲ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಲಾರಿಯೊಂದು ಸೈಕಲ್‌ಗೆ ಢಿಕ್ಕಿ ಹೊಡೆದ ಪರಿಣಾಮ ಸೈಕಲ್ ಸವಾರ ಮೃತಪಟ್ಟ ಘಟನೆ ನಡೆದಿದೆ.
ಮೃತರನ್ನು ಬಾಳ್ಕುದ್ರು ನಿವಾಸಿ ರೊನಾಲ್ಡ್ ಲೂವಿಸ್ (62) ಎಂದು ಗುರುತಿಸಲಾಗಿದೆ. ಅವರು ಹಂಗಾರಕಟ್ಟೆ ಅಂಚೆ ಕಚೇರಿಯಲ್ಲಿ ಅರೆಕಾಲಿಕ ನೌಕರರಾಗಿ ಕೆಲಸ ಮಾಡುತ್ತಿದ್ದರು.
ರೊನಾಲ್ಡ್ ಅವರು ಸೈಕಲ್‌ನಲ್ಲಿ ಹಂಗಾರಕಟ್ಟೆಯಿಂದ ಮಾಬುಕಳ ಸರ್ಕಲ್‌ಗೆ ಬಂದು ಹೆದ್ದಾರಿ ದಾಟುತ್ತಿದ್ದ ವೇಳೆ, ಉಡುಪಿ ಕಡೆಯಿಂದ ಕುಮಟಾ ಕಡೆಗೆ ತೆರಳುತ್ತಿದ್ದ ಲಾರಿ ಢಿಕ್ಕಿ ಹೊಡೆದಿದೆ. ಲಾರಿ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಿಸಿ ರಸ್ತೆ ಮಧ್ಯಭಾಗ ದಾಟಿ ಬಲಬದಿಗೆ ಬಂದು ಸೈಕಲ್‌ಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಢಿಕ್ಕಿಯ ರಭಸಕ್ಕೆ ರಸ್ತೆಗೆ ಬಿದ್ದ ರೊನಾಲ್ಡ್ ಅವರ ತಲೆಗೆ ಗಂಭೀರ ಗಾಯಗಳಾಗಿವೆ. ತಕ್ಷಣ ಸ್ಥಳೀಯರು ಟೋಲ್‌ಗೇಟ್‌ನ ಆಂಬುಲೆನ್ಸ್ ಮೂಲಕ ಅವರನ್ನು ಬ್ರಹ್ಮಾವರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಅವರನ್ನು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ.
ಘಟನಾ ಸ್ಥಳಕ್ಕೆ ಕೋಟ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.


