ಮಂಗಳೂರು: ಆ್ಯಪ್ ಡೌನ್ಲೋಡ್ ಮಾಡಿದರೆ ಎಲ್ಲಾ ಟಿವಿ ಚಾನೆಲ್ಗಳನ್ನು ಉಚಿತವಾಗಿ ವೀಕ್ಷಿಸಬಹುದು ಎಂಬ ಜಾಹೀರಾತನ್ನು ನಂಬಿದ ವ್ಯಕ್ತಿಯೊಬ್ಬರು ₹1,78,191 ಕಳೆದುಕೊಂಡಿದ್ದಾರೆ. ಈ ಸಂಬಂಧ ಮಂಗಳೂರಿನ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅ.15ರಂದು ದೂರುದಾರರು ಫೇಸ್ಬುಕ್ ವೀಕ್ಷಿಸುತ್ತಿದ್ದಾಗ ‘ಎಕ್ಸ್ಎಂ ಟಿವಿ’ ಆ್ಯಪ್ ಡೌನ್ಲೋಡ್ ಮಾಡಿದರೆ ಎಲ್ಲಾ ಟಿವಿ ಚಾನೆಲ್ಗಳನ್ನು ಉಚಿತವಾಗಿ ನೋಡಬಹುದು ಎಂಬ ಜಾಹೀರಾತು ಕಾಣಿಸಿಕೊಂಡಿತ್ತು. ಇದನ್ನು ನಂಬಿದ ಅವರು ಆ್ಯಪ್ ಡೌನ್ಲೋಡ್ ಮಾಡಿಕೊಂಡಿದ್ದರು. ಬಳಿಕ ಅ.16ರಂದು ಅವರ ಎರಡು ಬ್ಯಾಂಕ್ ಖಾತೆಗಳಿಂದ ಕ್ರಮವಾಗಿ ₹98,000 ಮತ್ತು ₹30,191 ಹಾಗೂ ಅ.17ರಂದು ₹50,000 ಹಣ ಅಪರಿಚಿತ ಖಾತೆಗಳಿಗೆ ವರ್ಗಾವಣೆಯಾಗಿತ್ತು.
ಅ.18ರಂದು ಖಾತೆಯಲ್ಲಿನ ಹಣ ಪರಿಶೀಲಿಸಿದಾಗ ಸಂಪೂರ್ಣ ಹಣ ಖಾಲಿಯಾಗಿರುವುದು ತಿಳಿದುಬಂದಿದೆ. ಸೈಬರ್ ಕ್ರೈಂ ಠಾಣೆಯಲ್ಲಿ ಪರಿಶೀಲಿಸಿದಾಗ ಮೊಬೈಲ್ನಲ್ಲಿ ಎಪಿಕೆ (APK) ಫೈಲ್ ಡೌನ್ಲೋಡ್ ಆಗಿರುವುದು ಪತ್ತೆಯಾಗಿದೆ. ಆ್ಯಪ್ ಡೌನ್ಲೋಡ್ ಮಾಡುವ ಸಂದರ್ಭದಲ್ಲಿ ಎಪಿಕೆ ಫೈಲ್ ಮೂಲಕ ಹಣ ವರ್ಗಾವಣೆಯಾಗಿ ವಂಚನೆ ನಡೆದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಹಣ ವಂಚಿಸಿದ ಅಪರಿಚಿತರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರುದಾರರು ಆಗ್ರಹಿಸಿದ್ದಾರೆ.


