ಮಂಗಳೂರು: ಕರಾವಳಿಯ ಹೆಮ್ಮೆಯ ಗಂಡುಕಲೆ ಯಕ್ಷಗಾನದಲ್ಲಿ ಧಾರ್ಮಿಕ ಸೌಹಾರ್ದತೆಯ ಅಪರೂಪದ ಹಾಗೂ ಸುಂದರ ಅಧ್ಯಾಯವೊಂದು ಅನಾವರಣಗೊಂಡಿದೆ. ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಆವರಣದಲ್ಲಿ ನಡೆದ ಯಕ್ಷಗಾನ ಕಾರ್ಯಕ್ರಮದಲ್ಲಿ ಮುಸ್ಲಿಂ ಯುವತಿಯೊಬ್ಬರು ‘ದೇವಿ ಮಹಾತ್ಮೆ’ ಪ್ರಸಂಗದ ಪ್ರಮುಖ ಪಾತ್ರವಾದ ಜಗನ್ಮಾತೆ ಶ್ರೀದೇವಿಯ ವೇಷ ಧರಿಸಿ ಅಭಿನಯಿಸುವ ಮೂಲಕ ಕಲಾಪ್ರೇಮಿಗಳ ಮನ ಸೆಳೆದಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಮಾಡ ಮೂಲದ, ‘ತನು ವಿಟ್ಲ’ ಎಂದೇ ಖ್ಯಾತರಾಗಿರುವ ಆರ್ಷಿಯಾ ಖಾನ್ ಅವರು ಅಕ್ಟೋಬರ್ 20ರಂದು ನಡೆದ ಪ್ರದರ್ಶನದಲ್ಲಿ ಅಷ್ಟಭುಜೆ ಶ್ರೀದೇವಿಯಾಗಿ ರಂಗಸ್ಥಳ ಪ್ರವೇಶಿಸಿದರು. ಈಗಾಗಲೇ ಯಕ್ಷಗಾನದ ಪ್ರಥಮ ಮುಸ್ಲಿಂ ಮಹಿಳಾ ಕಲಾವಿದೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಇವರು, ಈ ಹಿಂದೆ ಮಹಿಷಾಸುರ ಸೇರಿದಂತೆ ವಿವಿಧ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದರು. ಆದರೆ, ಇದೇ ಮೊದಲ ಬಾರಿಗೆ ದೇವಿಯ ಪಾತ್ರ ನಿರ್ವಹಿಸಿರುವುದು ಕಲಾಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಕದಳಿ ದಶಾಹ ಸಮಾರೋಪದ ವಿಶೇಷ ಪ್ರದರ್ಶನ: ಕದಳಿ ಕಲಾ ಕೇಂದ್ರದ ವತಿಯಿಂದ ದಸರಾ ಅಂಗವಾಗಿ ಕದ್ರಿ ಮಂಜುನಾಥ ದೇವಾಲಯದ ರಾಜಾಂಗಣದಲ್ಲಿ ಆಯೋಜಿಸಲಾಗಿದ್ದ 14ನೇ ವರ್ಷದ ‘ಕದಳಿ ದಶಾಹ’ 10 ದಿನಗಳ ಯಕ್ಷಗಾನ ಕಾರ್ಯಕ್ರಮ ಅಕ್ಟೋಬರ್ 11ರಿಂದ ಆರಂಭವಾಗಿ ಅಕ್ಟೋಬರ್ 20ರಂದು ಯಶಸ್ವಿಯಾಗಿ ಮುಕ್ತಾಯಗೊಂಡಿತು. ಸಮಾರೋಪದ ವಿಶೇಷ ಪ್ರದರ್ಶನವಾದ ‘ಸಂಪೂರ್ಣ ಶ್ರೀ ದೇವಿ ಮಹಾತ್ಮೆ’ ಪ್ರಸಂಗದಲ್ಲಿ ತೆಂಕುತಿಟ್ಟು ಯಕ್ಷಗಾನದ ಪ್ರಸಿದ್ಧ ಮೇಳಗಳ ಕಲಾವಿದರು ಭಾಗವಹಿಸಿದ್ದರು.
ಕಲೆಗೆ ಯಾವುದೇ ಜಾತಿ, ಧರ್ಮದ ಹಂಗಿಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿರುವ ಅರ್ಷಿಯಾ ಖಾನ್ ಅವರ ಈ ಸಾಧನೆಯನ್ನು ಯಕ್ಷಗಾನ ಪ್ರೇಮಿಗಳು ಹಾಗೂ ಸಾರ್ವಜನಿಕರು ತುಂಬು ಹೃದಯದಿಂದ ಸ್ವಾಗತಿಸಿದ್ದಾರೆ.


