ಬೆಳ್ತಂಗಡಿ: ನಾವೂರು ಗ್ರಾಮದ ನಾವೂರು ಪೇಟೆಯಲ್ಲಿರುವ ಡಾ. ಪ್ರದೀಪ್ ಅವರ ಆರೋಗ್ಯ ಕ್ಲಿನಿಕ್ಗೆ ಅಕ್ಟೋಬರ್ 6 ರಂದು ರಾತ್ರಿ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಕೃತ್ಯದ ಹಿಂದೆ ಇನ್ನೂ ಹಲವರು ಭಾಗಿಯಾಗಿರುವ ಶಂಕೆಯಿದೆ. ಈ ಹಿನ್ನೆಲೆಯಲ್ಲಿ ಪ್ರಕರಣದ ಕುರಿತು ಪೊಲೀಸ್ ಇಲಾಖೆ ಸಮಗ್ರ ತನಿಖೆ ನಡೆಸಿ, ಕೃತ್ಯದಲ್ಲಿ ಭಾಗಿಯಾಗಿರುವ ಎಲ್ಲರನ್ನೂ ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ನಾವೂರು ಗೋಪಾಲಕೃಷ್ಣ ದೇವಾಲಯದ ಟ್ರಸ್ಟ್ ಅಧ್ಯಕ್ಷ ಹರೀಶ್ ಸಾಲ್ಯಾನ್ ತಿಳಿಸಿದರು. ಅವರು ಆ 21 ರಂದು ಬೆಳ್ತಂಗಡಿಯ ಮಂಜುನಾಥ ಕಲಾಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,ಕ್ಲಿನಿಕ್ಗೆ ಬೆಂಕಿ ಹಚ್ಚಿದ ಘಟನೆಯ ಹಿಂದೆ ಇನ್ನೂ ಕೆಲವರ ಕೈವಾಡವಿರುವ ಸಾಧ್ಯತೆಯಿದ್ದು, ತನಿಖೆಯನ್ನು ಸೀಮಿತಗೊಳಿಸದೆ ಎಲ್ಲ ಆಯಾಮಗಳಲ್ಲೂ ಪರಿಶೀಲನೆ ನಡೆಸಬೇಕು ಎಂದು ಒತ್ತಾಯಿಸಿದರು.ಈಗಾಗಲೇ ಮೂವರು ಆರೋಪಿಗಳನ್ನು ಬಂಧಿಸಿರುವುದು ತಿಳಿದುಬಂದಿದ್ದರೂ, ಕೃತ್ಯದ ಹಿಂದಿರುವ ಎಲ್ಲರ ಪಾತ್ರದ ಬಗ್ಗೆ ಸ್ಪಷ್ಟತೆ ಮೂಡಬೇಕಿದೆ. ಆದ್ದರಿಂದ ಪೊಲೀಸರು ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಸತ್ಯಾಂಶವನ್ನು ಬಹಿರಂಗಪಡಿಸಬೇಕು ಎಂದು ಅವರು ಹೇಳಿದರು.
ಧಾರ್ಮಿಕ ವಿಚಾರದ ಹಿನ್ನೆಲೆಯ ಶಂಕೆ: ಕ್ಲಿನಿಕ್ಗೆ ಬೆಂಕಿ ಹಚ್ಚಿದ ಘಟನೆ ರಾಜಕೀಯ ಉದ್ದೇಶದಿಂದ ನಡೆದಿರುವುದಲ್ಲ, ಬದಲಾಗಿ ಧಾರ್ಮಿಕ ವಿಚಾರಕ್ಕೆ ಸಂಬಂಧಿಸಿದ ವಿಚಾರವಾಗಿದೆ. ಅಲ್ಲದೆ, ಸ್ಥಳೀಯ ಮನೆತನವೊಂದರ ವ್ಯಕ್ತಿಯ ಕೈವಾಡವಿರುವ ಶಂಕೆಯನ್ನೂ ವ್ಯಕ್ತಪಡಿಸಿ, ಸಂಬಂಧಪಟ್ಟ ವ್ಯಕ್ತಿಯ ಪಾತ್ರದ ಕುರಿತು ಸೂಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಸಮಗ್ರ ತನಿಖೆಗೆ ಒತ್ತಾಯ: ಈ ಘಟನೆಯಿಂದ ನಾವೂರು ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಪ್ರಕರಣದ ಸಂಪೂರ್ಣ ಸತ್ಯಾಂಶ ಹೊರಬರಬೇಕೆಂಬುದು ಗ್ರಾಮಸ್ಥರ ಆಶಯವಾಗಿದೆ. ಕ್ಲಿನಿಕ್ಗೆ ಬೆಂಕಿ ಹಚ್ಚಿದ ಕೃತ್ಯದಲ್ಲಿ ನೇರವಾಗಿ ಅಥವಾ ಪರೋಕ್ಷವಾಗಿ ಭಾಗಿಯಾಗಿರುವ ಎಲ್ಲರನ್ನೂ ಗುರುತಿಸಿ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಯಾವುದೇ ಒತ್ತಡಕ್ಕೆ ಮಣಿಯದೆ ಪೊಲೀಸರು ತನಿಖೆ ನಡೆಸಿ ಗ್ರಾಮಸ್ಥರಿಗೆ ನ್ಯಾಯ ಒದಗಿಸಬೇಕು.
ತನಿಖೆ ಸರಿಯಾಗಿ ನಡೆಯದಿದ್ದರೆ ಪ್ರತಿಭಟನೆ: ಪ್ರಕರಣದ ತನಿಖೆ ಸಮರ್ಪಕವಾಗಿ ನಡೆಯದಿದ್ದರೆ ಮತ್ತು ಕೃತ್ಯದ ಹಿಂದಿರುವವರನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ನ್ಯಾಯಕ್ಕಾಗಿ ಗ್ರಾಮಸ್ಥರು ಪ್ರತಿಭಟನೆ ನಡೆಸಬೇಕಾಗುತ್ತದೆ.ಅದ್ದರಿಂದ ಈ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿ, ಲಭ್ಯವಿರುವ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಸಮಗ್ರ ತನಿಖೆ ನಡೆಸಿ, ಘಟನೆಯ ಹಿಂದಿರುವ ನೈಜ ಕಾರಣ ಹಾಗೂ ಭಾಗಿಯಾಗಿರುವವರ ವಿವರಗಳನ್ನು ಬಹಿರಂಗಪಡಿಸಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ತನುಜ ಶೇಖರ್, ನಡ ಗ್ರಾಮ ಪಂಚಾಯತ್ನ ಮಾಜಿ ಸದಸ್ಯ ಪ್ರವೀಣ್ ವಿ.ಜಿ., ನಾವೂರು ಗ್ರಾಮ ಪಂಚಾಯತ್ನ ಮಾಜಿ ಅಧ್ಯಕ್ಷ ಗಣೇಶ್ ಗೌಡ ನಾವೂರು ಹಾಗೂ ಕೊಡಾಮಣಿತ್ತಾಯ ದೈವಸ್ಥಾನದ ಅಧ್ಯಕ್ಷ ಗಣೇಶ್ ಕಾಣಲು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.


