ಉಡುಪಿ: ಜಿಲ್ಲೆಯಿಂದ ಎಂ–ಸ್ಯಾಂಡ್, ಜಲ್ಲಿ ಸೇರಿದಂತೆ ಕಟ್ಟಡ ಸಾಮಗ್ರಿಗಳನ್ನು ಅಕ್ರಮವಾಗಿ ಹೊರರಾಜ್ಯಗಳಿಗೆ ಸಾಗಿಸಲಾಗುತ್ತಿದೆ. ಇದರಿಂದ ಜಿಲ್ಲೆಯಲ್ಲಿ ಸಾಮಗ್ರಿಗಳ ಕೊರತೆ ಉಂಟಾಗಿ ಬೆಲೆ ಏರಿಕೆಯಾಗುತ್ತಿದೆ ಎಂದು ಕಟ್ಟಡ ಸಾಮಗ್ರಿ ಸಾಗಾಟ ಲಾರಿ ಟೆಂಪೋ ಮಾಲಕರ ಸಂಘದ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವು ಗಣಿ ಗುತ್ತಿಗೆದಾರರು ಕಟ್ಟಡ ಸಾಮಗ್ರಿಗಳ ಬೆಲೆಯನ್ನು ಪದೇಪದೇ ಹೆಚ್ಚಿಸುತ್ತಿದ್ದಾರೆ. ಹೊರರಾಜ್ಯಗಳಿಗೆ ಸಾಮಗ್ರಿಗಳನ್ನು ಸಾಗಿಸುವುದರಿಂದ ಸ್ಥಳೀಯರಿಗೆ ದುಬಾರಿ ಬೆಲೆಗೆ ಖರೀದಿಸುವ ಪರಿಸ್ಥಿತಿ ಎದುರಾಗಿದೆ. ಇದರಿಂದ ಲಾರಿ ಮತ್ತು ಟೆಂಪೋ ಮಾಲಕರು, ಚಾಲಕರಿಗೂ ತೊಂದರೆಯಾಗುತ್ತಿದೆ ಎಂದರು.
ಜಿಲ್ಲಾಡಳಿತ ಕೂಡಲೇ ಅಕ್ರಮ ಸಾಗಣೆ ಮತ್ತು ಗಣಿಗಾರಿಕೆಯನ್ನು ತಡೆಯಬೇಕು. ಸ್ಥಳೀಯರಿಗೆ ಕೈಗೆಟುಕುವ ದರದಲ್ಲಿ ಕಟ್ಟಡ ಸಾಮಗ್ರಿಗಳು ದೊರೆಯುವಂತೆ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಲಾರಿ, ಟೆಂಪೋ ಮಾಲಕರು, ಚಾಲಕರು ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಬೃಹತ್ ಮುಷ್ಕರ ನಡೆಸಲಾಗುವುದು ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಹರೀಶ್ ಶೆಟ್ಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು.


