ಬೆಳ್ತಂಗಡಿ: ಅಂಡಿಂಜೆ ಗ್ರಾಮದ ಕಾಣಲಚ್ಚಿ ಎಂಬಲ್ಲಿ ಹಣವನ್ನು ಪಣವಾಗಿಟ್ಟು ಅಕ್ರಮವಾಗಿ ಕೋಳಿ ಅಂಕ ನಡೆಸುತ್ತಿದ್ದ ಸ್ಥಳಕ್ಕೆ ವೇಣೂರು ಪೊಲೀಸರು ದಾಳಿ ನಡೆಸಿ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ.
ವಶಕ್ಕೆ ಪಡೆದ ಆರೋಪಿಗಳನ್ನು ಮೋಹನ ಗೌಡ (45), ದಿನೇಶ್ (45), ಪ್ರಶಾಂತ್ (35) ಹಾಗೂ ಧೀರಜ್ ಎಂದು ಗುರುತಿಸಲಾಗಿದೆ.
ಅಕ್ಟೋಬರ್ 18ರಂದು ಮಧ್ಯಾಹ್ನ ಕೋಳಿ ಅಂಕ ನಡೆಯುತ್ತಿರುವ ಬಗ್ಗೆ ವೇಣೂರು ಪೊಲೀಸ್ ಠಾಣೆಯ ಪಿಎಸ್ಐ ಅಕ್ಷಯ ಡವಗಿ ಅವರಿಗೆ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ದಾಳಿ ನಡೆಸಿದಾಗ ಹಣವನ್ನು ಪಣವಾಗಿಟ್ಟು ಕೋಳಿ ಅಂಕ ನಡೆಸುತ್ತಿರುವುದು ದೃಢಪಟ್ಟಿದೆ.
ಪೊಲೀಸರು ದಾಳಿ ನಡೆಸುತ್ತಿದ್ದಂತೆ ಕೆಲವರು ಸ್ಥಳದಿಂದ ಪರಾರಿಯಾಗಿದ್ದು, ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ. ಅಲ್ಲದೆ, ಸ್ಥಳದಲ್ಲಿದ್ದ 7 ಕೋಳಿಗಳು, 3 ದ್ವಿಚಕ್ರ ವಾಹನಗಳು ಹಾಗೂ ಒಂದು ಆಟೋರಿಕ್ಷಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಸಂಬಂಧ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.


