ಬಂಟ್ವಾಳ: ಮನೆಗೆ ಬೀಗ ಹಾಕಿ ಸಂಬಂಧಿಕರ ಮನೆಗೆ ತೆರಳಿದ್ದ ಸಂದರ್ಭದಲ್ಲಿ ಕಳ್ಳರು ಹಿಂಬಾಗಿಲ ಮೂಲಕ ಪ್ರವೇಶಿಸಿ ₹3.62 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ದೋಚಿರುವ ಘಟನೆ ಕೊಲ್ನಾಡು ಗ್ರಾಮದ ಮೊಂತಿಮಾರು ನೊಳದಲ್ಲಿ ನಡೆದಿದೆ.
ಸ್ಥಳೀಯ ನಿವಾಸಿ, ‘ವಾಹ’ ಸಾಫ್ಟ್ ಡ್ರಿಂಕ್ಸ್ ತಯಾರಿಕಾ ಘಟಕದ ಮಾಲೀಕ ಮೊಹಮ್ಮದ್ ರಿಯಾಜ್ (34) ಕಳವುಗೀಡಾದವರು. ಅಕ್ಟೋಬರ್ 14ರಂದು ಬೆಳಿಗ್ಗೆ ಇವರು ಕುಟುಂಬ ಸಮೇತ ಮೊಂಟುಗೋಳಿಯಲ್ಲಿರುವ ಪತ್ನಿಯ ಮನೆಗೆ ತೆರಳಿದ್ದರು. ಅಕ್ಟೋಬರ್ 15ರಂದು ಬೆಳಿಗ್ಗೆ ವಾಪಸ್ ಬಂದು ನೋಡಿದಾಗ, ಕಳ್ಳರು ಹಿಂಬಾಗಿಲಿನ ಚಿಲಕ ತೆರೆದು ಒಳಪ್ರವೇಶಿಸಿರುವುದು ಬೆಳಕಿಗೆ ಬಂದಿದೆ.
ಕಪಾಟಿನ ಮೇಲಿದ್ದ ಕೀ ಬಳಸಿ ಗಾಡ್ರೇಜ್ನಲ್ಲಿದ್ದ ಹ್ಯಾಂಡ್ ಬ್ಯಾಗ್ನಿಂದ 30 ಗ್ರಾಂ ಚಿನ್ನಾಭರಣ (ಮೌಲ್ಯ ₹3.60 ಲಕ್ಷ) ಹಾಗೂ ₹2,000 ನಗದನ್ನು ಕಳವು ಮಾಡಲಾಗಿದೆ. ಈ ಕುರಿತು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ (ಅ.ಕ್ರ 137/2026) ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.


