Saturday, October 17, 2026
Homeಕರಾವಳಿವಿದ್ಯಾರ್ಥಿಗಳಿಗೆ ಹೊಡೆಸಿದ್ದೇವೆ ಎಂಬ ಆರೋಪ ಸಾಬೀತುಪಡಿಸಿ, ಇಲ್ಲವೇ ಕ್ಷಮೆಯಾಚಿಸಿ: ಶಾಸಕ ವೇದವ್ಯಾಸ ಕಾಮತ್ ವಿರುದ್ಧ ವಿಧಾನ...

ವಿದ್ಯಾರ್ಥಿಗಳಿಗೆ ಹೊಡೆಸಿದ್ದೇವೆ ಎಂಬ ಆರೋಪ ಸಾಬೀತುಪಡಿಸಿ, ಇಲ್ಲವೇ ಕ್ಷಮೆಯಾಚಿಸಿ: ಶಾಸಕ ವೇದವ್ಯಾಸ ಕಾಮತ್ ವಿರುದ್ಧ ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ ವಾಗ್ದಾಳಿ

- Advertisement -
- Advertisement -

ಮಂಗಳೂರು: ಆಗ್ನೇಸ್ ಕಾಲೇಜಿನ ವಿವಾದಕ್ಕೆ ಸಂಬಂಧಿಸಿ ಸಚಿವ ಯು.ಟಿ. ಖಾದರ್ ಮತ್ತು ತಾನು ಪೊಲೀಸರಿಗೆ ಹೇಳಿ ವಿದ್ಯಾರ್ಥಿಗಳಿಗೆ ಹೊಡೆಸಿದ್ದೇವೆ ಎಂಬ ಶಾಸಕ ವೇದವ್ಯಾಸ ಕಾಮತ್ ಅವರ ಆರೋಪವನ್ನು ಸಾಬೀತುಪಡಿಸಬೇಕು. ಇಲ್ಲವಾದರೆ ಕ್ಷಮೆಯಾಚಿಸಬೇಕು ಎಂದು ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ ಆಗ್ರಹಿಸಿದ್ದಾರೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿಸುವ ಕೆಲಸವನ್ನು ತಾನು ಎಂದಿಗೂ ಮಾಡುವುದಿಲ್ಲ. ಈ ಆರೋಪದಿಂದ ತಮಗೆ ನೋವಾಗಿದೆ. ತಾನು ಮತ್ತು ಸಚಿವ ಖಾದರ್ ಯಾವಾಗಲೂ ವಿದ್ಯಾರ್ಥಿಗಳ ಪರವಾಗಿ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಶಾಸಕ ವೇದವ್ಯಾಸ ಕಾಮತ್ ಸುಳ್ಳು ಆರೋಪಗಳ ಮೂಲಕ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ವಿದ್ಯಾರ್ಥಿಗಳ ನಡುವೆ ಭಿನ್ನಾಭಿಪ್ರಾಯ ಮೂಡಿಸಿ, ಧರ್ಮದ ಆಧಾರದಲ್ಲಿ ಸಮಾಜವನ್ನು ವಿಭಜಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಐವನ್ ಡಿ ಸೋಜ ಆರೋಪಿಸಿದರು.

ಪರೀಕ್ಷೆಯನ್ನು ಮುಂದೂಡುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿರುವುದು ತಪ್ಪಲ್ಲ. ವಿದ್ಯಾರ್ಥಿಗಳಿಗೆ ತಮ್ಮ ಹಕ್ಕುಗಳಿಗಾಗಿ ಹೋರಾಡುವ ಅವಕಾಶವಿದೆ. ಪರೀಕ್ಷೆಯನ್ನು ಮುಂದೂಡುವ ನಿರ್ಧಾರವನ್ನು ಕಾಲೇಜಿನ ಆಡಳಿತ ಮಂಡಳಿ ತೆಗೆದುಕೊಳ್ಳಬೇಕು ಎಂದರು. ಆಗ್ನೇಸ್ ಕಾಲೇಜಿನಲ್ಲಿ ಸರಕಾರಿ ರಜಾ ದಿನಗಳಂದು ತರಗತಿಗಳನ್ನು ನಡೆಸಲಾಗುತ್ತಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ರಜೆ ದಿನಗಳಲ್ಲಿ ತರಗತಿಗಳನ್ನು ನಡೆಸಿಲ್ಲ ಎಂದು ಕಾಲೇಜಿನ ಪ್ರಾಂಶುಪಾಲರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಆದರೂ ಕಾಲೇಜಿನ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಮೇಯರ್ ಶಶೀಧರ ಹೆಗ್ಡೆ, ದ.ಕ. ಜಿಲ್ಲಾ ಎನ್‌ಎಸ್‌ಯುಐ ಅಧ್ಯಕ್ಷ ಸುಹಾನ ಆಳ್ವ ಸೇರಿದಂತೆ ಪಕ್ಷದ ಹಲವು ಮುಖಂಡರು ಉಪಸ್ಥಿತರಿದ್ದರು.

- Advertisement -

Latest News

error: Content is protected !!