ಉಡುಪಿ: ಕಾಂಗ್ರೆಸ್ ಪಕ್ಷ ಸೇರುವ ಬಗ್ಗೆ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲವಾದರೂ, 2028ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದು ಸಂಪೂರ್ಣ ಖಚಿತ ಎಂದು ಉಡುಪಿ ಕ್ಷೇತ್ರದ ಮಾಜಿ ಶಾಸಕ ಕೆ. ರಘುಪತಿ ಭಟ್ ಸ್ಪಷ್ಟಪಡಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ನಿಂದ ಆಹ್ವಾನ ಬಂದಿರುವುದು ನಿಜ ಹಾಗೂ ಈ ಬಗ್ಗೆ ಗಂಭೀರವಾಗಿ ಯೋಚಿಸುತ್ತಿದ್ದೇನೆ ಎಂದರು. ಜೊತೆಗೆ, ಬಿಜೆಪಿಯಿಂದಲೂ ಆಹ್ವಾನ ಬರುವ ನಿರೀಕ್ಷೆಯಿದ್ದು, ಬೆಂಬಲಿಗರು ಹಾಗೂ ಹಿತೈಷಿಗಳ ಸಮಾಲೋಚನೆಯ ನಂತರವಷ್ಟೇ ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದರು.
ಕಳೆದ ಚುನಾವಣೆಯಲ್ಲಿ ಸ್ವಪಕ್ಷದ ಕೆಲ ನಾಯಕರಿಂದ ತಮಗೆ ವೈಯಕ್ತಿಕ ದಬ್ಬಾಳಿಕೆ ಹಾಗೂ ಅನ್ಯಾಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಹಿರಿಯ ನಾಯಕರು ಯಾರೂ ತಮ್ಮೊಂದಿಗೆ ಮಾತನಾಡದಿರುವುದು ತೀವ್ರ ನೋವುಂಟು ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದರು. ಕರಾವಳಿ ರಾಜಕಾರಣದಲ್ಲಿ ರಘುಪತಿ ಭಟ್ ಅವರ ಈ ಮುಂದಿನ ಹೆಜ್ಜೆ ಕುತೂಹಲ ಮೂಡಿಸಿದೆ.


