ನವದೆಹಲಿ: ಜರ್ಮನಿಯ ಫ್ರಾಂಕ್ಫರ್ಟ್ನಿಂದ ದೆಹಲಿಗೆ ಆಗಮಿಸುತ್ತಿದ್ದ ಏರ್ ಇಂಡಿಯಾ ಅಂತಾರಾಷ್ಟ್ರೀಯ ವಿಮಾನಕ್ಕೆ ಹೈಜಾಕ್ ಬೆದರಿಕೆಯ ಸಂದೇಶ ಬಂದ ಹಿನ್ನೆಲೆಯಲ್ಲಿ ಬುಧವಾರ (ಅ.14) ಜೈಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದೆ ಎಂದು ವರದಿಯಾಗಿದೆ.
ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದ (DGCA) ಮೂಲಗಳ ಪ್ರಕಾರ, ಬೋಯಿಂಗ್ 787-9 ಮಾದರಿಯ ವಿಮಾನವು ಸುರಕ್ಷಿತವಾಗಿ ಲ್ಯಾಂಡ್ ಆದ ಬಳಿಕ ಸಮಗ್ರ ಭದ್ರತಾ ತಪಾಸಣೆಗಾಗಿ ಅದನ್ನು ಪ್ರತ್ಯೇಕ ಸ್ಥಳಕ್ಕೆ ಕೊಂಡೊಯ್ಯಲಾಗಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಬುಧವಾರ ಬೆಳಗ್ಗೆ ಅಹಮದಾಬಾದ್ ಏರ್ ಟ್ರಾಫಿಕ್ ಕಂಟ್ರೋಲ್ಗೆ (ATC) ಏರ್ ಇಂಡಿಯಾ ವಿಮಾನದಿಂದ ತುರ್ತು ಸಂದೇಶ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ವಿಮಾನವನ್ನು ಜೈಪುರ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡುವಂತೆ ಭದ್ರತಾ ಏಜೆನ್ಸಿಗಳು ಸೂಚಿಸಿದ್ದವು.
ವಿಮಾನದ ತಪಾಸಣೆ ವೇಳೆ ಯಾವುದೇ ಭದ್ರತಾ ಲೋಪ ಅಥವಾ ಹೈಜಾಕ್ ಸಂಚು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ವಿಮಾನದಲ್ಲಿ ಬಳಸಲಾದ 7500 ತುರ್ತು ಸಂಕೇತದ ಕುರಿತು ತನಿಖೆ ಮುಂದುವರಿದಿದೆ. ಈ ಸಂಕೇತವನ್ನು ಸಾಮಾನ್ಯವಾಗಿ ವಿಮಾನ ಅಪಹರಣದ ಪರಿಸ್ಥಿತಿಯನ್ನು ಸೂಚಿಸಲು ಬಳಸಲಾಗುತ್ತದೆ.
ಏರ್ ಇಂಡಿಯಾ AI-2030 ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ಜೈಪುರ ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. ಜೈಪುರ ವಿಮಾನ ನಿಲ್ದಾಣವು ಅದಾನಿ ಸಮೂಹದ ಆಡಳಿತದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.


