ಉಚ್ಚಿಲ: ಯುವ ಕುಸ್ತಿ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ಕಳೆದ ಮೂರು ವರ್ಷಗಳಿಂದ ಉಚ್ಚಿಲ ದಸರಾ ಸಂದರ್ಭದಲ್ಲಿ ಕುಸ್ತಿ ಸ್ಪರ್ಧೆ ಆಯೋಜಿಸಲಾಗುತ್ತಿದೆ. ಈ ಬಾರಿ ದಾಖಲೆ ಸಂಖ್ಯೆಯಲ್ಲಿ ಸ್ಪರ್ಧಿಗಳು ಪಾಲ್ಗೊಂಡಿದ್ದು, ಮುಂದಿನ ವರ್ಷಗಳಲ್ಲಿ ಸ್ಪರ್ಧೆಯನ್ನು ಇನ್ನಷ್ಟು ಅದ್ದೂರಿಯಾಗಿ ಆಯೋಜಿಸಲಾಗುವುದು ಎಂದು ಉಡುಪಿ ಉಚ್ಚಿಲ ದಸರಾ ರೂವಾರಿ ಹಾಗೂ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ ನಾಡೋಜ ಡಾ. ಜಿ. ಶಂಕರ್ ಹೇಳಿದರು.
ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಆಡಳಿತಕ್ಕೊಳಪಟ್ಟ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆಯುತ್ತಿರುವ ಪಂಚಮ ವರ್ಷದ ಉಡುಪಿ ಉಚ್ಚಿಲ ದಸರಾ-2026ರ ಅಂಗವಾಗಿ ಮಂಗಳವಾರ ಆರಂಭವಾದ ರಾಜ್ಯಮಟ್ಟದ ಕುಸ್ತಿ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಬೆಳ್ಳಂಪಳ್ಳಿ ಮಾತನಾಡಿ, ಉಚ್ಚಿಲದ ಕುಸ್ತಿ ಸ್ಪರ್ಧೆ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರನ್ನು ಆಕರ್ಷಿಸುತ್ತಿದೆ. ಮೈಸೂರು ಕುಸ್ತಿ ಸ್ಪರ್ಧೆಗೆ ಸಮಾನವಾಗಿ ಇಲ್ಲಿ ಸ್ಪರ್ಧೆಗಳು ನಡೆಯುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಈ ಬಾರಿ ಒಟ್ಟು 235 ಸ್ಪರ್ಧಿಗಳು ಭಾಗವಹಿಸಿದ್ದು, ಪುರುಷರ 10 ಹಾಗೂ ಮಹಿಳೆಯರ ಎಂಟು ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯುತ್ತಿವೆ. ಪುರುಷರ ಮೂರು ಪ್ರತ್ಯೇಕ ವಿಭಾಗಗಳ ಶ್ರೇಷ್ಠ ಸ್ಪರ್ಧಿಗಳಿಗೆ ‘ಉಚ್ಚಿಲ ದಸರಾ ಕೇಸರಿ’ ಬಿರುದು ಹಾಗೂ ಬೆಳ್ಳಿಯ ಗದೆ ನೀಡಿ ಗೌರವಿಸಲಾಗುತ್ತದೆ. ಮಹಿಳಾ ವಿಭಾಗದ ವಿಜೇತರಿಗೆ ‘ಉಚ್ಚಿಲ ದಸರಾ ಕುವರಿ’ ಬಿರುದು ಮತ್ತು ಬೆಳ್ಳಿಯ ಗದೆ ಪ್ರದಾನ ಮಾಡಲಾಗುತ್ತದೆ. ಕಿರಿಯರ ವಿಭಾಗದ ವಿಜೇತರಿಗೂ ಬೆಳ್ಳಿಯ ಗದೆ ನೀಡಲಾಗುತ್ತದೆ.
ಪುರುಷರ ವಿಭಾಗದ ಬೆಳ್ಳಿಯ ಗದೆಯನ್ನು ಬೇಂಗ್ರೆತೋಟ ಶ್ರೀ ವೀರ ಹನುಮಾನ್ ವ್ಯಾಯಾಮ ಶಾಲೆ ಪ್ರಾಯೋಜಿಸಿದೆ. ಮಹಿಳಾ ವಿಭಾಗದ ಗದೆಯನ್ನು ದಿ. ಸರೋಜಿನಿ ಪುಂಡಲೀಕ ಕರ್ಕೇರ ಅವರ ಸ್ಮರಣಾರ್ಥ ಅವರ ಮಕ್ಕಳು ನೀಡಿದ್ದು, ಕಿರಿಯರ ವಿಭಾಗದ ಗದೆಯನ್ನು ಉಳ್ಳಾಲ ಮೊಗವೀರ ಹಳೆ ವಿದ್ಯಾರ್ಥಿ ಸಂಘ (ಬ್ರದರ್ ಸ್ಪೋರ್ಟ್ಸ್ ಕ್ಲಬ್) ಪ್ರಾಯೋಜಿಸಿದೆ.
ಯುವ ಪ್ರತಿಭೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕುಸ್ತಿ ಸಮಿತಿಯು ಎರಡು ವಿಶೇಷ ಪ್ರಶಸ್ತಿಗಳನ್ನು ಘೋಷಿಸಿದೆ. ಎಲ್ಲ ವಿಭಾಗಗಳ ವಿಜೇತರಿಗೆ ಪ್ರಶಸ್ತಿಗಳ ಜೊತೆಗೆ ನಗದು ಬಹುಮಾನವೂ ದೊರೆಯಲಿದೆ ಎಂದು ಕುಸ್ತಿ ಸಮಿತಿ ಸಂಚಾಲಕ ವಿಜಯ ಸುವರ್ಣ ತಿಳಿಸಿದರು.
ಕಾರ್ಯಕ್ರಮದಲ್ಲಿ ಮಹಾಜನ ಸಂಘದ ಉಪಾಧ್ಯಕ್ಷ ಮೋಹನ್ ಬೇಂಗ್ರೆ, ಉಚ್ಚಿಲ ದಸರಾ ಸಮಿತಿ ಅಧ್ಯಕ್ಷ ವಿನಯ ಕರ್ಕೇರ ಮಲ್ಪೆ, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಗಿರಿಧರ ಎಸ್. ಸುವರ್ಣ, ಉಡುಪಿ ಜಿಲ್ಲಾ ಕುಸ್ತಿ ಅಸೋಸಿಯೇಷನ್ ಅಧ್ಯಕ್ಷ ಗೋವರ್ಧನ ಬಂಗೇರ, ದಕ್ಷಿಣ ಕನ್ನಡ ಜಿಲ್ಲಾ ಕುಸ್ತಿ ಅಸೋಸಿಯೇಷನ್ ಉಪಾಧ್ಯಕ್ಷ ಶೋಭೇಂದ್ರ ಸಸಿಹಿತ್ತು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಮಹಾಜನ ಸಂಘದ ಪ್ರಧಾನ ಕಾರ್ಯದರ್ಶಿ ಶರಣ್ ಕುಮಾರ್ ಮಟ್ಟು ಕಾರ್ಯಕ್ರಮ ನಿರ್ವಹಿಸಿ, ಸ್ವಾಗತಿಸಿದರು.


