ಪಾಟ್ನಾ: ಬಿಹಾರದ ವೈಶಾಲಿ ಜಿಲ್ಲೆಯ ರಾಘೋಪುರದ ಸಮೀಪ ಗಂಗಾ ನದಿಯಲ್ಲಿ ಮಂಗಳವಾರ ರಾತ್ರಿ ಸಂಭವಿಸಿದ ದೋಣಿ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ. ಸುಮಾರು 30 ಜನರನ್ನು ಕರೆದೊಯ್ಯುತ್ತಿದ್ದ ದೋಣಿ ನದಿಯ ಮಧ್ಯದಲ್ಲಿ ಮಗುಚಿ ಬಿದ್ದಿದ್ದು, ಹಲವರು ನೀರಿನಲ್ಲಿ ಮುಳುಗಿದ್ದಾರೆ.
ರಾಘೋಪುರ ಪೊಲೀಸ್ ಠಾಣೆ ವ್ಯಾಪ್ತಿಯ ರಾಮ್ಪುರ ಶ್ಯಾಮ್ ಚಂದ್ ಗ್ರಾಮದ ನಿವಾಸಿಗಳು ಔತಣಕೂಟಕ್ಕೆ ತೆರಳುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ದೋಣಿಯಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚಿನ ಜನರಿದ್ದ ಕಾರಣ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ದೋಣಿಯಲ್ಲಿದ್ದವರಲ್ಲಿ ಹೆಚ್ಚಿನವರು ಮಕ್ಕಳು ಎನ್ನಲಾಗಿದೆ.
ಘಟನೆ ಕುರಿತು ಮಾಹಿತಿ ನೀಡಿದ ವೈಶಾಲಿ ಜಿಲ್ಲಾಧಿಕಾರಿ ವರ್ಷಾ ಸಿಂಗ್, ದೋಣಿ ದುರಂತದಲ್ಲಿ 13 ಮಂದಿ ಮೃತಪಟ್ಟಿದ್ದು, ಆರು ಜನರನ್ನು ರಕ್ಷಿಸಲಾಗಿದೆ. ಉಳಿದವರಿಗಾಗಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ತಿಳಿಸಿದ್ದಾರೆ.
ಘಟನಾ ಸ್ಥಳದಲ್ಲಿ ಮುಳುಗು ತಜ್ಞರು, ಸ್ಥಳೀಯ ಪೊಲೀಸರು ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪಡೆಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ತಿರ್ಹುತ್ ವಲಯದ ಪೊಲೀಸ್ ಉಪ ಮಹಾನಿರೀಕ್ಷಕ ಚಂದನ್ ಕುಮಾರ್ ಕುಶ್ವಾಹಾ ಮಾಹಿತಿ ನೀಡಿದ್ದಾರೆ.
ಈ ದುರಂತಕ್ಕೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಹಾಗೂ ಗಾಯಾಳುಗಳಿಗೆ ತಲಾ 50,000 ರೂ. ಪರಿಹಾರ ಘೋಷಿಸಿದ್ದಾರೆ.


