ಮಂಗಳೂರು; ಆಸ್ತಿಯಾಸೆಗೆ ಮಗಳೇ ಸ್ವಂತ ತಂದೆಯನ್ನು ಕೊಲೆ ಮಾಡಿರಬಹುದು ಎಂಬ ಗಂಭೀರ ಶಂಕೆಯ ಹಿನ್ನೆಲೆಯಲ್ಲಿ, ಸುಮಾರು ಎರಡು ತಿಂಗಳ ಹಿಂದೆ ಮೃತಪಟ್ಟಿದ್ದ ವೃದ್ಧರೊಬ್ಬರ ಮೃತದೇಹವನ್ನು ದಫನ ಭೂಮಿಯಿಂದ ಹೊರತೆಗೆದು ವೈಜ್ಞಾನಿಕ ತನಿಖೆಗೆ ಒಳಪಡಿಸುತ್ತಿರುವ ಅಪರೂಪದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಮಂಗಳೂರಿನ ಕೊಟ್ಟಾರ ಫಸ್ಟ್ ಕ್ರಾಸ್ ನಿವಾಸಿ, ಅನಿವಾಸಿ ಭಾರತೀಯರಾಗಿದ್ದ ಆಲ್ಬರ್ಟ್ ರೇಗೋ (ಜುಲೈ 19ರಂದು ಮೃತಪಟ್ಟಿದ್ದರು.) ಅವರ ಮೃತದೇಹವನ್ನು ನಗರದ ದೇರೆಬೈಲ್ ಚರ್ಚ್ನ ದಫನ ಭೂಮಿಯಿಂದ ಮಂಗಳೂರು ತಹಶೀಲ್ದಾರ್ ಸಮ್ಮುಖದಲ್ಲಿ ಉರ್ವಾ ಪೊಲೀಸರು ಹಾಗೂ ಫಾರೆನ್ಸಿಕ್ (FSL) ತಜ್ಞರ ತಂಡ ಹೊರತೆಗೆದಿದೆ.
ವಿದೇಶದಲ್ಲಿ ಉದ್ಯೋಗದಲ್ಲಿದ್ದು ಸಾಕಷ್ಟು ಆಸ್ತಿ ಗಳಿಸಿದ್ದ ಆಲ್ಬರ್ಟ್ ರೇಗೋ ಅವರು ಕಳೆದ ಜುಲೈ 19ರಂದು ಸಂಶಯಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದರು. ಮೃತರ ನಾಲ್ವರು ಮಕ್ಕಳಲ್ಲಿ ಇಬ್ಬರು ದುಬೈನಲ್ಲಿ ನೆಲೆಸಿದ್ದು, ಮಂಗಳೂರಿನಲ್ಲಿ ತಂದೆಯೊಂದಿಗೆ ವಾಸವಿದ್ದ ಮಗಳು ಮಾಯಾ ರೇಗೋ ನಿರಂತರವಾಗಿ ಅವರಿಗೆ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ.
ಆಲ್ಬರ್ಟ್ ಅವರ ಸಾವಿನ ಬಳಿಕ ಸಂಬಂಧಿಕರಿಗಾಗಲಿ, ಸ್ಥಳೀಯರಿಗಾಗಲಿ ಸರಿಯಾದ ಮಾಹಿತಿ ನೀಡದೆ ಹಾಗೂ ಮರಣೋತ್ತರ ಪರೀಕ್ಷೆಯನ್ನೂ ನಡೆಸದೆ ತಡಿಬಿಡಿಯಾಗಿ ಅಂತ್ಯಕ್ರಿಯೆ ನೆರವೇರಿಸಲಾಗಿತ್ತು ಎಂಬ ಆರೋಪ ಕೇಳಿಬಂದಿತ್ತು.ಸಾವಿನ ಕುರಿತು ತೀವ್ರ ಅನುಮಾನ ವ್ಯಕ್ತಪಡಿಸಿದ ಆಲ್ಬರ್ಟ್ ಅವರ ಆಪ್ತ ಸ್ನೇಹಿತ ಹೆರಾಲ್ಡ್ ಪಿರೇರಾ ಎಂಬುವರು ಉರ್ವಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಸಾವಿಗೂ ಮುನ್ನ ಆಲ್ಬರ್ಟ್ ಅವರಿಂದ ಬಲವಂತವಾಗಿ ವಿಲ್ ಬರೆಸಿಕೊಳ್ಳಲಾಗಿತ್ತು. ಅಲ್ಲದೆ ಮಗಳು ಮಾಯಾ ರೇಗೋ ತನ್ನ ಆಪ್ತರೊಂದಿಗೆ ಸೇರಿ, ಮಾತ್ರೆ ಅಥವಾ ವಿಷ ನೀಡಿ ಕೊಲೆ ಮಾಡಿರುವ ಸಾಧ್ಯತೆಯಿದೆ ಎಂದು ದೂರಿನಲ್ಲಿ ಶಂಕೆ ವ್ಯಕ್ತಪಡಿಸಲಾಗಿತ್ತು.
ದೂರಿನ ಆಧಾರದ ಮೇಲೆ ಮಗಳು ಮಾಯಾ ರೇಗೋ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಉರ್ವಾ ಪೊಲೀಸರು ತನಿಖೆ ಆರಂಭಿಸಿದ್ದು, ಸಾವಿನ ನೈಜ ಕಾರಣ ಕಂಡುಕೊಳ್ಳಲು ಶವಪರೀಕ್ಷೆ ಅಗತ್ಯವೆಂದು ಕಂಡುಬಂದ ಹಿನ್ನೆಲೆಯಲ್ಲಿ ತಹಶೀಲ್ದಾರ್ ಸಮ್ಮುಖದಲ್ಲಿ ಶವವನ್ನು ಹೊರತೆಗೆಯುವ ಕಾರ್ಯಾಚರಣೆ ನಡೆಸಿದ್ದಾರೆ.ಫಾರೆನ್ಸಿಕ್ ತಜ್ಞರು ಮೃತದೇಹದ ಅವಶೇಷಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಿದ್ದು, ವರದಿ ಬಂದ ಬಳಿಕವಷ್ಟೇ ಇದು ಸಹಜ ಸಾವೋ ಅಥವಾ ಆಸ್ತಿಗಾಗಿ ನಡೆದ ಕೊಲೆಯೇ ಎಂಬ ಸತ್ಯಾಂಶ ಹೊರಬರಬೇಕಿದೆ.


