ಮಂಗಳೂರು: ನಕಲಿ ಪಾಸ್ಪೋರ್ಟ್ ಬಳಸಿ ವಿದೇಶಕ್ಕೆ ತೆರಳಲು ಯತ್ನಿಸಿದ್ದ ಪ್ರಕರಣದಲ್ಲಿ ನ್ಯಾಯಾಲಯದಿಂದ ಶಿಕ್ಷೆಗೆ ಗುರಿಯಾಗಿ ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮಂಗಳೂರು ಉತ್ತರ ಉಪವಿಭಾಗದ ಎಸಿಪಿ ನೇತೃತ್ವದ ತಂಡ ಬಂಧಿಸಿದೆ.
ಬಂಧಿತನನ್ನು ಕಾಸರಗೋಡು ಜಿಲ್ಲೆಯ ವೇಲಾಯುಧನ್ (54) ಎಂದು ಗುರುತಿಸಲಾಗಿದೆ.
2010ರ ಜೂನ್ 22ರಂದು ವೇಲಾಯುಧನ್ ನಕಲಿ ಪಾಸ್ಪೋರ್ಟ್ ಬಳಸಿ ಬಜಪೆ ವಿಮಾನ ನಿಲ್ದಾಣದ ಮೂಲಕ ವಿದೇಶಕ್ಕೆ ತೆರಳಲು ಯತ್ನಿಸಿದ್ದ. ಈ ವೇಳೆ ಇಮಿಗ್ರೇಷನ್ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದು ಬಜಪೆ ಪೊಲೀಸರಿಗೆ ಒಪ್ಪಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಬಜಪೆ ಪೊಲೀಸ್ ಠಾಣೆಯಲ್ಲಿ ವಿವಿಧ ಐಪಿಸಿ ಕಲಂಗಳು ಹಾಗೂ ಪಾಸ್ಪೋರ್ಟ್ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ತನಿಖೆ ಪೂರ್ಣಗೊಳಿಸಿದ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಸೆಷನ್ಸ್ ನ್ಯಾಯಾಲಯವು 2020ರ ಡಿಸೆಂಬರ್ 1ರಂದು ವೇಲಾಯುಧನ್ಗೆ 1 ವರ್ಷ 6 ತಿಂಗಳ ಜೈಲು ಶಿಕ್ಷೆ ವಿಧಿಸಿತ್ತು. ಈ ತೀರ್ಪಿನ ವಿರುದ್ಧ ಆತ ಕರ್ನಾಟಕ ಹೈಕೋರ್ಟ್ಗೆ ಕ್ರಿಮಿನಲ್ ರಿವಿಷನ್ ಪಿಟಿಷನ್ ಸಲ್ಲಿಸಿದ್ದರೂ, ನ್ಯಾಯಾಲಯ ಮನವಿಯನ್ನು ತಿರಸ್ಕರಿಸಿತ್ತು.
ಬಳಿಕ ಬಂಧನದಿಂದ ತಪ್ಪಿಸಿಕೊಂಡು ತಲೆಮರೆಸಿಕೊಂಡಿದ್ದ ವೇಲಾಯುಧನ್ಗಾಗಿ ಪೊಲೀಸರು ಶೋಧ ನಡೆಸುತ್ತಿದ್ದರು. ಇದೀಗ ಅಕ್ಟೋಬರ್ 8ರಂದು ಮಂಗಳೂರು ಉತ್ತರ ಉಪವಿಭಾಗದ ಎಸಿಪಿ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿದೆ.
ಬಂಧಿತನನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಬಜಪೆ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.


