ಮೂಡುಬಿದಿರೆ : ತಾಲೂಕಿನ ಕೋಟೆಬಾಗಿಲು ವೀರ ಮಾರುತಿ ದೇವಸ್ಥಾನದ ಬಳಿಯ ಅಪಾಯಕಾರಿ ತಿರುವಿನಲ್ಲಿ ಸ್ಕೂಟರ್ ನಿಯಂತ್ರಣ ತಪ್ಪಿ ಬಿದ್ದ ಪರಿಣಾಮ, ಕಾಲೇಜು ವಿದ್ಯಾರ್ಥಿಯೊಬ್ಬ ತೀವ್ರ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟ ದಾರುಣ ಘಟನೆ ಬುಧವಾರ ಸಂಜೆ ಸಂಭವಿಸಿದೆ.
ಕೋಟೆಬಾಗಿಲು ನಿವಾಸಿ ಸುಧಾಕರ ಹೆಗ್ಡೆ ಅವರ ಪುತ್ರ, ಮೂಡುಬಿದಿರೆಯ ಜೈನ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಪ್ರಶ್ವಿತ್ ಹೆಗ್ಡೆ (17) ಮೃತಪಟ್ಟ ವಿದ್ಯಾರ್ಥಿ.
ಘಟನೆಯ ವಿವರ: ಬುಧವಾರ ಸಂಜೆ ಪ್ರಶ್ವಿತ್ ಹೆಗ್ಡೆ ಅವರು ತಮ್ಮ ತಂದೆಯ ಹೋಟೆಲ್ನಲ್ಲಿ ತಿಂಡಿ ಮುಗಿಸಿ, ಸ್ನೇಹಿತ ದೀಕ್ಷಿತ್ ಹೆಗ್ಡೆ ಅವರೊಂದಿಗೆ ಒಂದೇ ಸ್ಕೂಟರಿನಲ್ಲಿ ಶಿರ್ತಾಡಿ ಕಡೆಯಿಂದ ಕೋಟೆಬಾಗಿಲಿನ ತಮ್ಮ ಮನೆಗೆ ತೆರಳುತ್ತಿದ್ದರು. ವೀರ ಮಾರುತಿ ದೇವಸ್ಥಾನದ ಬಳಿಯ ತಿರುವಿನಲ್ಲಿ ಸಾಗುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿದ ಸ್ಕೂಟರ್ ರಸ್ತೆಗೆ ಬಿದ್ದಿದೆ.
ಅಪಘಾತದ ರಭಸಕ್ಕೆ ಸ್ಕೂಟರ್ನಿಂದ ಬಿದ್ದ ಪ್ರಶ್ವಿತ್ ಹೆಗ್ಡೆ ಅವರ ತಲೆಗೆ ತೀವ್ರ ಸ್ವರೂಪದ ಪೆಟ್ಟು ಬಿದ್ದಿತ್ತು. ಜೊತೆಯಲ್ಲಿದ್ದ ದೀಕ್ಷಿತ್ ಅವರಿಗೂ ತಲೆಯ ಭಾಗಕ್ಕೆ ಗಾಯಗಳಾಗಿದ್ದವು. ತಕ್ಷಣವೇ ಕಾರ್ಯಪ್ರವೃತ್ತರಾದ ಸ್ಥಳೀಯರು ಇಬ್ಬರನ್ನೂ ಚಿಕಿತ್ಸೆಗೆಂದು ಮೂಡುಬಿದಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ತಲೆಗೆ ಭಾರಿ ಪ್ರಮಾಣದ ಆಂತರಿಕ ಪೆಟ್ಟಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಪ್ರಶ್ವಿತ್ ಹೆಗ್ಡೆ ಕೊನೆಯುಸಿರೆಳೆದಿದ್ದಾರೆ.ಘಟನೆಗೆ ಸಂಬಂಧಿಸಿದಂತೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.


