ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ಟೀಕಿಸುವ ವ್ಯಂಗ್ಯಚಿತ್ರಗಳನ್ನು ಪ್ರಕಟಿಸಿದ್ದ ಖ್ಯಾತ ವ್ಯಂಗ್ಯಚಿತ್ರಕಾರ ಸತೀಶ್ ಆಚಾರ್ಯ ಅವರ ಇನ್‌ಸ್ಟಾಗ್ರಾಮ್ ಖಾತೆಯನ್ನು ಒಂದು ವಾರದ ಬಳಿಕ ಮರುಸ್ಥಾಪಿಸಲಾಗಿದೆ.
ಸೆಪ್ಟೆಂಬರ್ 28ರಂದು ಅವರ ಖಾತೆಯನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿತ್ತು. ಕಾನೂನು ಅಗತ್ಯತೆಗಳ ಹಿನ್ನೆಲೆಯಲ್ಲಿ ಖಾತೆಗೆ ಪ್ರವೇಶ ನಿರ್ಬಂಧಿಸಿರುವುದಾಗಿ ಇನ್‌ಸ್ಟಾಗ್ರಾಮ್ ತಿಳಿಸಿತ್ತು.
ಖಾತೆ ಮರುಸ್ಥಾಪನೆಯ ಬಳಿಕ ಪ್ರತಿಕ್ರಿಯಿಸಿದ ಸತೀಶ್ ಆಚಾರ್ಯ, “ಅಂತಿಮವಾಗಿ ಇನ್‌ಸ್ಟಾಗ್ರಾಮ್‌ನ ನಿರ್ಬಂಧ ತೆರವಾಗಿದೆ. ನನ್ನನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು. ಇದು ನನಗೆ ಬಹಳ ಮಹತ್ವದ ಬೆಳವಣಿಗೆ” ಎಂದು ತಿಳಿಸಿದ್ದಾರೆ. ಬಳಿಕ ‘UNBLOCKED’ ಎಂಬ ಶೀರ್ಷಿಕೆಯ ವ್ಯಂಗ್ಯಚಿತ್ರವನ್ನೂ ಹಂಚಿಕೊಂಡಿದ್ದಾರೆ.
ನಿರ್ಬಂಧಕ್ಕೊಳಗಾದ ಪೋಸ್ಟ್‌ಗಳಲ್ಲಿ ಪ್ರಧಾನಿ ಮೋದಿ ಅವರನ್ನು ಟೀಕಿಸುವ ವ್ಯಂಗ್ಯಚಿತ್ರವೂ ಸೇರಿತ್ತು. ಭಾರತೀಯ ಚುನಾವಣಾ ಆಯೋಗಕ್ಕೆ ಸಂಬಂಧಿಸಿದ ‘ಇಂಡಿಯನ್ ಎಕ್ಸ್‌ಪ್ರೆಸ್’ ವರದಿಯ ಹಿನ್ನೆಲೆಯಲ್ಲಿ ಈ ವ್ಯಂಗ್ಯಚಿತ್ರವನ್ನು ಆಚಾರ್ಯ ಅವರು ಪ್ರಕಟಿಸಿದ್ದರು.


