Friday, September 25, 2026
Homeಕರಾವಳಿಮಂಗಳೂರುನೀಲಿ ಶಾಲಿನ ಬಗ್ಗೆ ಪ್ರತಾಪ್ ಸಿಂಹ ಹೇಳಿಕೆ ದುರಹಂಕಾರದ ಪರಮಾವಧಿ: ರಕ್ಷಿತ್ ಶಿವರಾಂ

ನೀಲಿ ಶಾಲಿನ ಬಗ್ಗೆ ಪ್ರತಾಪ್ ಸಿಂಹ ಹೇಳಿಕೆ ದುರಹಂಕಾರದ ಪರಮಾವಧಿ: ರಕ್ಷಿತ್ ಶಿವರಾಂ

- Advertisement -
- Advertisement -

ಬೆಳ್ತಂಗಡಿ: ದಲಿತ ಸಂಘಟನೆಗಳ ಕಾರ್ಯಕರ್ತರು ಹಾಗೂ ದಲಿತ ಸಮುದಾಯದ ಸ್ವಾಭಿಮಾನದ ಸಂಕೇತವಾಗಿರುವ ನೀಲಿ ಶಾಲಿನ ಕುರಿತು ಮೈಸೂರಿನ ಮಾಜಿ ಸಂಸದ ಪ್ರತಾಪ್ ಸಿಂಹ ನೀಡಿರುವ ಹೇಳಿಕೆ ಅತ್ಯಂತ ಆಕ್ಷೇಪಾರ್ಹವಾಗಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಹೇಳಿದ್ದಾರೆ.

ನೀಲಿ ಶಾಲು ಕೇವಲ ಒಂದು ಬಣ್ಣದ ಶಾಲಲ್ಲ; ಅದು ದಲಿತ ಸಮುದಾಯದ ಸ್ವಾಭಿಮಾನ, ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಹೋರಾಟದ ಪ್ರತೀಕವಾಗಿದೆ. ಸಾವಿರಾರು ವರ್ಷಗಳಿಂದ ಜಾತಿ ಅಸ್ಪೃಶ್ಯತೆ, ಅಸಮಾನತೆ ಹಾಗೂ ತಾರತಮ್ಯದ ವಿರುದ್ಧ ನಡೆದ ಹೋರಾಟಗಳಿಗೆ ಇದು ಸ್ಪೂರ್ತಿಯಾಗಿದೆ. ಇಂತಹ ಸಂಕೇತವನ್ನು ಪ್ರಶ್ನಿಸುವ ಮೂಲಕ ಪ್ರತಾಪ್ ಸಿಂಹ ದಲಿತ ಸಮುದಾಯದ ಸ್ವಾಭಿಮಾನಕ್ಕೇ ಧಕ್ಕೆ ತಂದಿದ್ದಾರೆ ಎಂದು ಅವರು ಕಿಡಿಕಾರಿದ್ದಾರೆ.

ದಲಿತ ಸಮುದಾಯ ಮತ್ತು ಅವರ ಸಂಕೇತಗಳ ಬಗ್ಗೆ ಮಾತನಾಡುವ ಮುನ್ನ ತಮ್ಮ ಹೇಳಿಕೆಯ ಸಾಮಾಜಿಕ ಹಾಗೂ ರಾಜಕೀಯ ಪರಿಣಾಮಗಳನ್ನು ಪ್ರತಾಪ್ ಸಿಂಹ ಅರ್ಥೈಸಿಕೊಳ್ಳಬೇಕು. ರಾಜಕೀಯ ಅಸ್ತಿತ್ವಕ್ಕಾಗಿ ನಾನಾ ಸಂಕೇತಗಳನ್ನು ಬಳಸುವವರು, ಮತ್ತೊಂದು ಸಮುದಾಯದ ಸ್ವಾಭಿಮಾನದ ಸಂಕೇತವನ್ನು ಅಪಹಾಸ್ಯ ಮಾಡುವುದು ಎಷ್ಟು ಸರಿ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದಿದ್ದಾರೆ.

ಡಾ. ಬಿ.ಆರ್. ಅಂಬೇಡ್ಕರ್ ಅವರ ವಿಚಾರಧಾರೆ ಹಾಗೂ ಸಮಾನತೆಯ ಹೋರಾಟದ ಕುರಿತು ದಲಿತ ಸಮುದಾಯಕ್ಕೆ ಯಾರೂ ಪಾಠ ಹೇಳಬೇಕಾಗಿಲ್ಲ. ಅಂಬೇಡ್ಕರ್ ಅವರ ಚಿಂತನೆಗಳನ್ನು ತಮ್ಮ ರಾಜಕೀಯ ಅನುಕೂಲಕ್ಕೆ ತಕ್ಕಂತೆ ವ್ಯಾಖ್ಯಾನಿಸುವುದನ್ನು ಸಮುದಾಯ ಎಂದಿಗೂ ಒಪ್ಪುವುದಿಲ್ಲ ಎಂದು ರಕ್ಷಿತ್ ಶಿವರಾಂ ಸ್ಪಷ್ಟಪಡಿಸಿದ್ದಾರೆ.

ಪ್ರತಾಪ್ ಸಿಂಹ ತಮ್ಮ ಹೇಳಿಕೆಯನ್ನು ತಕ್ಷಣ ಹಿಂಪಡೆದು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಪ್ರಜಾಸತ್ತಾತ್ಮಕವಾಗಿ ಪ್ರತಿಭಟನೆ ನಡೆಸಲಾಗುವುದು ಹಾಗೂ ಅವರು ಭಾಗವಹಿಸುವ ವಿವಿಧ ಕಾರ್ಯಕ್ರಮಗಳಲ್ಲಿ ವಿರೋಧ ವ್ಯಕ್ತಪಡಿಸಿ ಆಕ್ರೋಶ ದಾಖಲಿಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.

- Advertisement -

Latest News

error: Content is protected !!