ಬಂಟ್ವಾಳ: ಕೃಷಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಹೆಜ್ಜೇನುಗಳು ದಾಳಿ ನಡೆಸಿದ ಪರಿಣಾಮ ಗಂಭೀರವಾಗಿ ಅಸ್ವಸ್ಥಗೊಂಡಿದ್ದ ವೃದ್ಧೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಬಂಟ್ವಾಳ ಕಸಬಾ ಗ್ರಾಮದ ಕೆಮ್ಮಟ್ಟೆ ಗುಡ್ಡೆಯಲ್ಲಿ ನಡೆದಿದೆ.ಕೆಮ್ಮಟ್ಟೆ ಗುಡ್ಡೆ ನಿವಾಸಿ ಕಮಲಾ (74) ಮೃತಪಟ್ಟ ವೃದ್ಧೆ.
ಸೆಪ್ಟೆಂಬರ್ 23ರಂದು ಬೆಳಿಗ್ಗೆ ಕಮಲಾ ಅವರು ಮನೆಯ ಪಕ್ಕದಲ್ಲಿದ್ದ ಅಡಿಕೆ ತೋಟದಲ್ಲಿ ಹುಲ್ಲು ತೆಗೆಯಲು ಹಾಗೂ ಕೃಷಿ ಕೆಲಸಕ್ಕೆ ತೆರಳಿದ್ದಾಗ ಹೆಜ್ಜೇನುಗಳು ದಾಳಿ ನಡೆಸಿ ಬೆನ್ನು, ಕಾಲು ಹಾಗೂ ಮುಖ ಸೇರಿದಂತೆ ದೇಹದ ವಿವಿಧ ಭಾಗಗಳಿಗೆ ತೀವ್ರವಾಗಿ ಕಚ್ಚಿದ್ದವು. ಬಳಿಕ ಮನೆಗೆ ಬಂದ ಅವರು ವಿಷಯವನ್ನು ಪುತ್ರ ದಿನೇಶ್ ಅವರಿಗೆ ತಿಳಿಸಿದ್ದಾರೆ.
ತಕ್ಷಣವೇ ದಿನೇಶ್ ಅವರು ತಾಯಿಯನ್ನು ಬಂಟ್ವಾಳದ ಕ್ಲಿನಿಕ್‌ಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ಮನೆಗೆ ಕರೆತಂದಿದ್ದರು. ಆದರೆ ಮಧ್ಯಾಹ್ನದ ವೇಳೆಗೆ ಕಮಲಾ ಅವರು ಮಾತನಾಡದೆ ತೀವ್ರ ಅಸ್ವಸ್ಥಗೊಂಡಿದ್ದರಿಂದ, ಅವರನ್ನು ಅಂಬುಲೆನ್ಸ್ ಮೂಲಕ ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಯಿತು. ಪರೀಕ್ಷಿಸಿದ ವೈದ್ಯರು, ಆಸ್ಪತ್ರೆಗೆ ಕರೆತರುವ ಮಾರ್ಗಮಧ್ಯೆಯೇ ಕಮಲಾ ಅವರು ಮೃತಪಟ್ಟಿರುವುದಾಗಿ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಪುತ್ರ ದಿನೇಶ್ ನೀಡಿದ ದೂರಿನನ್ವಯ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.


