ಸುಳ್ಯ: ಮಂಗಳೂರಿನಿಂದ ಮಡಿಕೇರಿ ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್‌ನಲ್ಲಿ ಮಹಿಳೆಯೊಬ್ಬರ ಬ್ಯಾಗ್ ಕಳವು ಮಾಡಿರುವ ಘಟನೆ ಸುಳ್ಯ ಬಸ್ ನಿಲ್ದಾಣದಲ್ಲಿ ನಡೆದಿದೆ. ಬ್ಯಾಗ್‌ನಲ್ಲಿದ್ದ ಹಣ ಹಾಗೂ ಮೊಬೈಲ್ ಕಳೆದುಕೊಂಡ ಮಹಿಳೆ ಆತಂಕದಿಂದ ಅಸ್ವಸ್ಥಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಚೆಂಬು ಗ್ರಾಮದ ಬಾಲೆಂಬಿ ನಿವಾಸಿ ಕಮಲ ಅವರು ಸುಳ್ಯ ಬಸ್ ನಿಲ್ದಾಣದಲ್ಲಿ ಮಗುವಿನ ಮುಖ ತೊಳೆಯಲು ಕೆಳಗಿಳಿದಾಗ, ಬಸ್‌ನ ಸೀಟಿನಲ್ಲಿಟ್ಟಿದ್ದ ಬ್ಯಾಗ್ ನಾಪತ್ತೆಯಾಗಿದೆ. ವಾಪಸ್ ಬಂದು ನೋಡಿದಾಗ ಸೀಟಿನಲ್ಲಿದ್ದ ಬ್ಯಾಗ್ ಹಾಗೂ ಪಕ್ಕದಲ್ಲೇ ಕುಳಿತಿದ್ದ ವ್ಯಕ್ತಿ ಇಬ್ಬರೂ ಕಾಣೆಯಾಗಿದ್ದರು. ಬಳಿಕ ಪರಿಶೀಲಿಸಿದ ಬಸ್ ನಿಲ್ದಾಣದ ಸಿಸಿಟಿವಿ ದೃಶ್ಯಾವಳಿಯಲ್ಲಿ, ವ್ಯಕ್ತಿಯೊಬ್ಬ ಬ್ಯಾಗ್ ಹಿಡಿದು ಹೊರನಡೆಯುತ್ತಿರುವುದು ಸೆರೆಯಾಗಿದೆ.
ಘಟನೆಯಿಂದ ತೀವ್ರ ಆತಂಕಕ್ಕೊಳಗಾದ ಮಹಿಳೆಯ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ, ಕಲ್ಲುಗುಂಡಿ ಬಳಿ ಬಸ್ ನಿಲ್ಲಿಸಿ ಸ್ಥಳೀಯರ ನೆರವಿನಿಂದ ಆಂಬ್ಯುಲೆನ್ಸ್ ಮೂಲಕ ಸುಳ್ಯ ಸರ್ಕಾರಿ ಆಸ್ಪತ್ರೆಗೆ, ನಂತರ ಹೆಚ್ಚಿನ ಚಿಕಿತ್ಸೆಗೆ ಕೆ.ವಿ.ಜಿ. ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ಆರೋಪಿಯ ಪತ್ತೆಗೆ ಜಾಲ ಬೀಸಿದ್ದಾರೆ.


