ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಹಾಗೂ ಮಂಗಳೂರಿನ ಫಿಟ್ನೆಸ್ ತರಬೇತುದಾರ ಪ್ರದೀಪ್ ಕುಮಾರ್ ಆಚಾರ್ಯ ಅವರು ಮುಂಬೈನಲ್ಲಿ ನಡೆದ ಜಾಗತಿಕ ಮಟ್ಟದ ‘ಹೈರಾಕ್ಸ್’ (HYROX) ಫಿಟ್ನೆಸ್ ಸ್ಪರ್ಧೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.
ಮುಂಬೈನ ಗೋರೆಗಾಂವ್ನ ನೆಸ್ಕೋ ಕೇಂದ್ರದ ಹಾಲ್ 6ರಲ್ಲಿ ಸೆ.17ರಿಂದ 20ರವರೆಗೆ ನಡೆದ ಸ್ಪರ್ಧೆಯಲ್ಲಿ ಮಾಸ್ಟರ್ಸ್ ಯೂನಿಯನ್ ವಿಶ್ವವಿದ್ಯಾಲಯ ಅಧಿಕೃತ ಪಾಲುದಾರರಾಗಿ ಸಹಕರಿಸಿತ್ತು. ದರ್ಶನ್ ಎಚ್.ವಿ. ಹಾಗೂ ಪ್ರದೀಪ್ ಕುಮಾರ್ ಆಚಾರ್ಯ ಅವರು ಪುರುಷರ ಡಬಲ್ಸ್ ವಿಭಾಗದಲ್ಲಿ ಸ್ಪರ್ಧಿಸಿದ್ದರು. ಅಂತರರಾಷ್ಟ್ರೀಯ ಪವರ್ಲಿಫ್ಟರ್ ಹಾಗೂ ‘ಕಾಷಾರ್ಪ್ ಫಿಟ್ನೆಸ್’ ಸಂಸ್ಥೆಯ ತರಬೇತುದಾರರಾದ ಪ್ರದೀಪ್ ಕುಮಾರ್ ಆಚಾರ್ಯ ಅವರೊಂದಿಗೆ ದರ್ಶನ್ ಎಚ್.ವಿ. ಅವರು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಈ ಜೋಡಿ ಒಟ್ಟು 8 ಕಿ.ಮೀ. ಓಟ ಹಾಗೂ 8 ಕಠಿಣ ವ್ಯಾಯಾಮಗಳನ್ನು ಒಳಗೊಂಡ ರೇಸ್ ಅನ್ನು 1 ಗಂಟೆ 39 ನಿಮಿಷ 9 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿತು. 2017ರಲ್ಲಿ ಜರ್ಮನಿಯಲ್ಲಿ ಆರಂಭಗೊಂಡ ‘ಹೈರಾಕ್ಸ್’ ಜಾಗತಿಕವಾಗಿ ಜನಪ್ರಿಯವಾಗಿರುವ ಒಳಾಂಗಣ ಫಿಟ್ನೆಸ್ ರೇಸ್ ಆಗಿದೆ.
ವಿಶ್ವದ ಯಾವುದೇ ನಗರದಲ್ಲಿ ಸ್ಪರ್ಧೆ ನಡೆದರೂ ಇದರ ನಿಯಮಗಳು, ಓಟದ ಅಂತರ ಹಾಗೂ ವ್ಯಾಯಾಮಗಳ ಸ್ವರೂಪ ಒಂದೇ ರೀತಿಯಾಗಿರುತ್ತವೆ. ಓಟದ ವೇಗದ ಜೊತೆಗೆ ಸ್ಪರ್ಧಿಗಳ ಸಹಿಷ್ಣುತೆ, ದೈಹಿಕ ಸಾಮರ್ಥ್ಯ, ಸಾಮರ್ಥ್ಯ ಮತ್ತು ತಂಡದ ಸಮನ್ವಯವನ್ನು ಈ ಸ್ಪರ್ಧೆ ಕಠಿಣವಾಗಿ ಪರೀಕ್ಷಿಸುತ್ತದೆ.


