Wednesday, September 16, 2026
Homeತಾಜಾ ಸುದ್ದಿಜ್ಯೋತಿಷ್ಯದ ನೆಪದಲ್ಲಿ ವೃದ್ಧೆಗೆ 40 ಲಕ್ಷ ರೂ. ವಂಚನೆ: ಎಐ ವೀಡಿಯೋ ಕಳುಹಿಸಿ ಚಾಲಾಕಿ ಜ್ಯೋತಿಷಿ...

ಜ್ಯೋತಿಷ್ಯದ ನೆಪದಲ್ಲಿ ವೃದ್ಧೆಗೆ 40 ಲಕ್ಷ ರೂ. ವಂಚನೆ: ಎಐ ವೀಡಿಯೋ ಕಳುಹಿಸಿ ಚಾಲಾಕಿ ಜ್ಯೋತಿಷಿ ಎಸ್ಕೇಪ್!

- Advertisement -
- Advertisement -

ಬೆಂಗಳೂರು: ಜ್ಯೋತಿಷ್ಯ ಹಾಗೂ ಚೌಡೇಶ್ವರಿ ಪೂಜೆಯ ನೆಪದಲ್ಲಿ 62 ವರ್ಷದ ವೃದ್ಧೆಯೊಬ್ಬರಿಂದ ಬರೋಬ್ಬರಿ 40 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿ, ಬಳಿಕ ತನಗೆ ಅಪಘಾತವಾಗಿದೆ ಎಂದು ಎಐ ವೀಡಿಯೋ ಸೃಷ್ಟಿಸಿ ವಂಚಿಸಿರುವ ರೋಚಕ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ.

ಬ್ಯಾಟರಾಯನಪುರ ನಿವಾಸಿ ಶಾಂತಮ್ಮ (62) ವಂಚನೆಗೊಳಗಾದ ಮಹಿಳೆಯಾಗಿದ್ದು, ವೆಂಕಟೇಶ್ ಎಂಬ ನಕಲಿ ಜ್ಯೋತಿಷಿ ಈ ಕೃತ್ಯ ಎಸಗಿದ್ದಾನೆ. ವಿಕ್ಟೋರಿಯಾ ಆಸ್ಪತ್ರೆಯ ಫುಟ್‌ಪಾತ್‌ನಲ್ಲಿ ಜ್ಯೋತಿಷ್ಯ ಹೇಳುತ್ತಿದ್ದ ವೆಂಕಟೇಶ್‌ಗೆ, ಅನಾರೋಗ್ಯದ ಕಾರಣ ಆಸ್ಪತ್ರೆಗೆ ಬಂದು ಹೋಗುತ್ತಿದ್ದ ಶಾಂತಮ್ಮ ಅವರ ಪರಿಚಯವಾಗಿತ್ತು. ಅವರ ಕೌಟುಂಬಿಕ ಮತ್ತು ಆರೋಗ್ಯ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಈತ, ಮನೆಗೆ ಬಂದು ಚೌಡೇಶ್ವರಿ ಪೂಜೆ ಮಾಡುವುದಾಗಿ ನಂಬಿಸಿದ್ದ.

ಕಾಕತಾಳೀಯವಾಗಿ ಪೂಜೆಯ ನಂತರ ಮಹಿಳೆಯ ಆರೋಗ್ಯ ಚೇತರಿಸಿದ್ದರಿಂದ, ತಮ್ಮ ಮಗನ ಕುಡಿತದ ಚಟ ಹಾಗೂ ಮಗಳ ಮದುವೆಯ ಕುರಿತಾಗಿಯೂ ಆತನಲ್ಲಿ ಪರಿಹಾರ ಕೇಳಿದ್ದರು. ಇದನ್ನು ದುರುಪಯೋಗಪಡಿಸಿಕೊಂಡ ವಂಚಕ, ಮನೆಯಲ್ಲಿರುವ ಚಿನ್ನಾಭರಣಗಳಿಗೆ ಪೂಜೆ ಮಾಡಿದರೆ ದೋಷ ನಿವಾರಣೆಯಾಗುತ್ತದೆ ಎಂದು ನಂಬಿಸಿ ಪ್ರತಿ ಅಮಾವಾಸ್ಯೆ ಮತ್ತು ಹುಣ್ಣಿಮೆಯಂದು ಒಡವೆಗಳನ್ನು ಒಯ್ಯುತ್ತಿದ್ದ. ಹೀಗೆ ಕಳೆದ 1 ವರ್ಷದಲ್ಲಿ ಹಂತ ಹಂತವಾಗಿ ಸುಮಾರು 40 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಪಡೆದುಕೊಂಡಿದ್ದ.

ಕಳೆದ ಆಗಸ್ಟ್ 19 ರಂದು ವರಮಹಾಲಕ್ಷ್ಮಿ ಹಬ್ಬದ ಪೂಜೆಗೆ ಚಿನ್ನಾಭರಣಗಳನ್ನು ವಾಪಸ್ ನೀಡುವಂತೆ ಶಾಂತಮ್ಮ ಕೇಳಿದ್ದರು. ಇದರಿಂದ ಗಾಬರಿಗೊಂಡ ಜ್ಯೋತಿಷಿ, ತನಗೆ ಭೀಕರ ಅಪಘಾತವಾಗಿದೆ ಎಂದು ಬೇರೊಬ್ಬರಿಂದ ಕರೆ ಮಾಡಿಸಿ ನಾಟಕವಾಡಿದ್ದ. ಅಲ್ಲದೆ, ತಲೆಗೆ ಗಂಭೀರ ಗಾಯವಾಗಿ ಆಸ್ಪತ್ರೆಗೆ ದಾಖಲಾಗಿರುವಂತೆ ಎಐ ತಂತ್ರಜ್ಞಾನ ಬಳಸಿ ನಕಲಿ ವೀಡಿಯೋ ಸೃಷ್ಟಿಸಿ ಕಳುಹಿಸಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದ.

ಸಂಶಯಗೊಂಡ ಶಾಂತಮ್ಮ ತಮ್ಮ ಮಕ್ಕಳಿಗೆ ಆ ವೀಡಿಯೋ ತೋರಿಸಿದಾಗ ಅದು ಎಐ ಮೂಲಕ ಸೃಷ್ಟಿಸಿದ ಫೇಕ್ ವೀಡಿಯೋ ಎಂಬುದು ಬಯಲಾಗಿದೆ. ಈ ಕುರಿತು ಬ್ಯಾಟರಾಯನಪುರ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ತಲೆಮರೆಸಿಕೊಂಡಿರುವ ಖತರ್ನಾಕ್ ನಕಲಿ ಜ್ಯೋತಿಷಿಗಾಗಿ ಪೊಲೀಸರು ಜಾಲ ಬೀಸಿದ್ದಾರೆ.

- Advertisement -

Latest News

error: Content is protected !!