Wednesday, September 16, 2026
Homeಕರಾವಳಿಮಂಗಳೂರುಮಂಗಳೂರು:ಮೆದುಳು ನಿಷ್ಕ್ರಿಯಗೊಂಡ 21 ವರ್ಷದ ಯುವಕನ ಅಂಗಾಂಗ ದಾನ: ಕುತ್ತಾರು ಅಪಘಾತ ಸಂತ್ರಸ್ತನ ಪೋಷಕರ ಮಾನವೀಯ...

ಮಂಗಳೂರು:ಮೆದುಳು ನಿಷ್ಕ್ರಿಯಗೊಂಡ 21 ವರ್ಷದ ಯುವಕನ ಅಂಗಾಂಗ ದಾನ: ಕುತ್ತಾರು ಅಪಘಾತ ಸಂತ್ರಸ್ತನ ಪೋಷಕರ ಮಾನವೀಯ ನಿರ್ಧಾರ

- Advertisement -
- Advertisement -

ಮಂಗಳೂರು: ಕುತ್ತಾರುವಿನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡು ಮೆದುಳು ನಿಷ್ಕ್ರಿಯಗೊಂಡಿದ್ದ 21 ವರ್ಷದ ಯುವಕನ ಅಂಗಾಂಗಗಳನ್ನು ದಾನ ಮಾಡಲು ಅವರ ಪೋಷಕರು ನಿರ್ಧರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಕುತ್ತಾರುವಿನ ಆಯೆರೆಬೆಟ್ಟು ನಿವಾಸಿ ಗೋಪಾಲ ಹಾಗೂ ವೇದಾವತಿ ದಂಪತಿಯ ಕಿರಿಯ ಪುತ್ರ, ಫ್ಯಾಬ್ರಿಕೇಷನ್ ಕೆಲಸ ಮಾಡುತ್ತಿದ್ದ ವರ್ಷಿತ್ ಕುಲಾಲ್ (21) ಮಿದುಳು ನಿಷ್ಕ್ರಿಯಗೊಂಡ ದುರ್ದೈವಿ.

ಸೋಮವಾರ ರಾತ್ರಿ ಸುಮಾರು 7:30ರ ವೇಳೆಗೆ ವರ್ಷಿತ್ ಕುಲಾಲ್ ಅವರು ಬೈಕಿನಲ್ಲಿ ಮನೆಗೆ ತೆರಳುತ್ತಿದ್ದಾಗ, ಕುತ್ತಾರುವಿನ ಕೊರಗಜ್ಜನ ಆದಿ ಕ್ಷೇತ್ರದ ಬಳಿ ಎದುರಿನಿಂದ ವೇಗವಾಗಿ ಬಂದ ಸ್ಕೂಟರ್ ಢಿಕ್ಕಿ ಹೊಡೆದಿತ್ತು. ಅಪಘಾತದ ರಭಸಕ್ಕೆ ರಸ್ತೆಗೆ ಎಸೆಯಲ್ಪಟ್ಟು ತಲೆಗೆ ತೀವ್ರ ಗಾಯಗೊಂಡಿದ್ದ ಅವರನ್ನು ದೇರಳಕಟ್ಟೆಯ ಯೆನೆಪೋಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಅವರ ಮಿದುಳು ನಿಷ್ಕ್ರಿಯಗೊಂಡಿದೆ (Brain Dead) ಎಂದು ವೈದ್ಯರು ಸ್ಪಷ್ಟಪಡಿಸಿದರು.

ಮಗನ ಸಾವಿನ ದುಃಖದಲ್ಲೂ ಪೋಷಕರು ವರ್ಷಿತ್ ಅವರ ಅಂಗಾಂಗಗಳನ್ನು ದಾನ ಮಾಡಲು ಒಪ್ಪಿಗೆ ನೀಡಿದ್ದಾರೆ. ವರ್ಷಿತ್ ಅವರ ಮೂತ್ರಪಿಂಡ, ಯಕೃತ್ತು, ಹೃದಯ ಹಾಗೂ ಶ್ವಾಸಕೋಶಗಳನ್ನು ಅಗತ್ಯವಿರುವ ರೋಗಿಗಳಿಗೆ ಕ್ಷಿಪ್ರವಾಗಿ ತಲುಪಿಸಲು ಆಸ್ಪತ್ರೆಯ ಮೂಲಗಳ ಪ್ರಕಾರ ‘ಗ್ರೀನ್ ಕಾರಿಡಾರ್’ ವ್ಯವಸ್ಥೆ ಮಾಡಲಾಗಿದೆ.

ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಸ್ಕೂಟರ್ ಸವಾರ ಧೀರಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಮಂಗಳೂರು ದಕ್ಷಿಣ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

- Advertisement -

Latest News

error: Content is protected !!