ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ವಿ. ಸುನಿಲ್ ಕುಮಾರ್ ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಾತ್ಮಕ ಮತ್ತು ಆಕ್ಷೇಪಾರ್ಹ ಸಂದೇಶ ಹಂಚಿಕೊಂಡಿದ್ದ ಕಾಂಗ್ರೆಸ್ ಕಾರ್ಯಕರ್ತನೊಬ್ಬನನ್ನು ಕಾರ್ಕಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಪ್ರಸಾದ್ ಶೆಟ್ಟಿ ಎಂದು ಗುರುತಿಸಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಶಾಸಕರಿಗೆ ಜೀವ ಬೆದರಿಕೆ ಹಾಕುವ ರೀತಿಯಲ್ಲಿ ಪೋಸ್ಟ್ ಮಾಡಿದ್ದು, ‘ಶಾಸಕರ ತಲೆ ಬೇಕು’ ಎಂಬ ಪ್ರಚೋದನಕಾರಿ ಸಂದೇಶ ರವಾನಿಸಲಾಗಿತ್ತು ಎನ್ನಲಾಗಿದೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಸ್ಥಳೀಯವಾಗಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.
ವಿಷಯ ತಿಳಿಯುತ್ತಿದ್ದಂತೆಯೇ ಸಕ್ರಿಯರಾದ ಕಾರ್ಕಳ ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಪ್ರಸಾದ್ ಶೆಟ್ಟಿಯ ಈ ಕೃತ್ಯದ ಹಿಂದಿನ ಉದ್ದೇಶ ಹಾಗೂ ಇದರ ಹಿಂದೆ ಯಾರಾದರೂ ಪ್ರೇರಣೆ ನೀಡಿದ್ದಾರೆಯೇ ಎಂಬಿತ್ಯಾದಿ ಕೋನಗಳಲ್ಲಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.


