ಉಡುಪಿ: ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ನಿಯಮಬಾಹಿರವಾಗಿ ಪಿಕಪ್ ವಾಹನದಲ್ಲಿ ಮಕ್ಕಳನ್ನು ಸಾಗಿಸುತ್ತಿದ್ದ ಚಾಲಕನ ವಿರುದ್ಧ ಕಾಪು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ವಾಹನವನ್ನು ವಶಕ್ಕೆ ಪಡೆದಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮವೊಂದಕ್ಕಾಗಿ ಮಕ್ಕಳನ್ನು ಸರಕು ಸಾಗಣೆ ಪಿಕಪ್ ವಾಹನದಲ್ಲಿ ಕೂರಿಸಿಕೊಂಡು ಕರೆದೊಯ್ಯಲಾಗುತ್ತಿತ್ತು. ಈ ವೇಳೆ ವಾಹನದ ದುರ್ಬಳಕೆ ಹಾಗೂ ಸಂಚಾರ ಸುರಕ್ಷತಾ ನಿಯಮಗಳ ಸ್ಪಷ್ಟ ಉಲ್ಲಂಘನೆ ಕಂಡುಬಂದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ತಕ್ಷಣವೇ ವಾಹನವನ್ನು ಜಪ್ತಿ ಮಾಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಪಿಕಪ್ ಚಾಲಕನ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (BNS) ಕಲಂ 281, 125 ಹಾಗೂ ಮೋಟಾರು ವಾಹನ (MV) ಕಾಯ್ದೆಯ ಕಲಂ 66 ರೊಂದಿಗೆ 192(ಎ), ಕಲಂ 100 ರೊಂದಿಗೆ 177ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಮಕ್ಕಳ ಪ್ರಾಣರಕ್ಷಣೆ ಹಾಗೂ ಸಾರ್ವಜನಿಕ ಸುರಕ್ಷತೆಯ ಹಿತದೃಷ್ಟಿಯಿಂದ ಸರಕು ವಾಹನಗಳಲ್ಲಿ ಪ್ರಯಾಣಿಕರನ್ನು ಅನಧಿಕೃತವಾಗಿ ಸಾಗಾಟ ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಮುಂದುವರಿಯಲಿದೆ ಎಂದು ಪೊಲೀಸ್ ಮೂಲಗಳು ಎಚ್ಚರಿಸಿವೆ.


