ಮುಲ್ಕಿ: ತಾಲೂಕಿನ ಕಿಲ್ಪಾಡಿಯ ಪ್ರಸಿದ್ಧ ಕೋರ್ದಬ್ಬು ದೈವಸ್ಥಾನದಲ್ಲಿ ನಡೆದಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಆಭರಣ ಕಳ್ಳತನ ಪ್ರಕರಣವನ್ನು ಭೇದಿಸಿರುವ ಮೂಲ್ಕಿ ಪೊಲೀಸರು, ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಿಬ್ಬರು ತಲೆಮರೆಸಿಕೊಂಡಿದ್ದು, ಅವರಿಗಾಗಿ ಬಲೆ ಬೀಸಿದ್ದಾರೆ.
ಬಂಧಿತರನ್ನು ಪಡುಬಿದ್ರೆ ಕಂಚಿನಡ್ಕದ ಜಾಹಿದ್ ಸಿನಾನ್, ಪ್ರಸ್ತುತ ಕಾರ್ನಾಡ್ ನಿವಾಸಿ ಯಾಸಿನ್ ಹಾಗೂ ದಾವಣಗೆರೆಯ ಅಬ್ದುಲ್ ಜುಮಾಲ್ ಮತ್ತು ಮಹಮ್ಮದ್ ಆಫ್ರಿದ್ ಎಂದು ಗುರುತಿಸಲಾಗಿದೆ.
ದೈವಸ್ಥಾನದಲ್ಲಿ ಯಾರೂ ಇಲ್ಲದ ಸಮಯ ನೋಡಿಕೊಂಡು ಪೂರ್ವನಿಯೋಜಿತವಾಗಿ ಸಂಚು ರೂಪಿಸಿದ್ದ ಕಳ್ಳರು, ದೈವದ ಕಡಸಾಲೆ ಸೇರಿದಂತೆ ಸುಮಾರು 36 ಲಕ್ಷ ರೂಪಾಯಿ ಮೌಲ್ಯದ ಬೆಲೆಬಾಳುವ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ದೋಚಿ ಪರಾರಿಯಾಗಿದ್ದರು.
ಧಾರ್ಮಿಕ ಶ್ರದ್ಧಾಕೇಂದ್ರದಲ್ಲಿ ನಡೆದ ಈ ಕಳ್ಳತನ ಕೃತ್ಯ ಸ್ಥಳೀಯವಾಗಿ ತೀವ್ರ ಆಕ್ರೋಶ ಹಾಗೂ ಬಿಗುವಿನ ವಾತಾವರಣಕ್ಕೆ ಕಾರಣವಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತೀವ್ರ ಶೋಧ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಸ್ತುತ ಬಂಧಿತರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದ್ದು, ತಲೆಮರೆಸಿಕೊಂಡಿರುವ ಬಾಕಿ ಇಬ್ಬರು ಆರೋಪಿಗಳಿಗಾಗಿ ಜಾಲ ಬೀಸಿದ್ದಾರೆ.


