ಬೆಂಗಳೂರು: ಶಿಕ್ಷಕರ ದಿನಾಚರಣೆಯ ಶುಭ ಸಂದರ್ಭದಲ್ಲಿ ರಾಜ್ಯದ ಶಿಕ್ಷಕರಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭರ್ಜರಿ ಸಿಹಿ ಸುದ್ದಿ ನೀಡಿದ್ದಾರೆ. ವೈದ್ಯರು ‘Dr’, ಎಂಜಿನಿಯರ್ಗಳು ‘Er’ ಹಾಗೂ ಪ್ರೊಫೆಸರ್ಗಳು ‘Prof’ ಎಂದು ಬಳಸುವಂತೆ, ಇನ್ಮುಂದೆ ರಾಜ್ಯದ ಶಿಕ್ಷಕರು ಸಹ ತಮ್ಮ ಹೆಸರಿನ ಮುಂದೆ ಗೌರವಸೂಚಕವಾಗಿ “Tr.” (ಟೀಚರ್) ಎಂದು ಬರೆದುಕೊಳ್ಳಬಹುದು ಎಂದು ಸಿಎಂ ಶನಿವಾರ ಪ್ರಕಟಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ‘X’ನಲ್ಲಿ ಹಂಚಿಕೊಂಡಿರುವ ಮುಖ್ಯಮಂತ್ರಿಗಳು, “ನಾಡು ಹಾಗೂ ರಾಷ್ಟ್ರವನ್ನು ಕಟ್ಟುವ ಪ್ರತಿಯೊಬ್ಬ ವ್ಯಕ್ತಿಯ ಹಿಂದೆಯೂ ಒಬ್ಬ ಶಿಕ್ಷಕರಿರುತ್ತಾರೆ. ಕರ್ನಾಟಕದ ೪.೫ ಲಕ್ಷ ಶಿಕ್ಷಕರು ಸೇರಿದಂತೆ ದೇಶದ ಲಕ್ಷಾಂತರ ಶಿಕ್ಷಕರು ನಿಸ್ವಾರ್ಥ ಸೇವೆಯ ಮೂಲಕ ಮಕ್ಕಳ ಭವಿಷ್ಯವನ್ನು ತಿದ್ದಿ ತೀಡುತ್ತಿದ್ದಾರೆ. ಅವರ ಈ ಅಪಾರ ಕೊಡುಗೆ ಹಾಗೂ ತ್ಯಾಗಕ್ಕೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಈ ಮಹತ್ವದ ನಿರ್ಧಾರ ಕೈಗೊಂಡಿದೆ” ಎಂದು ತಿಳಿಸಿದ್ದಾರೆ.
“Tr. ಎಂಬುದು ಕೇವಲ ಬಿರುದಲ್ಲ, ಸಮಾಜವನ್ನು ಮುನ್ನಡೆಸುವ ಶಿಕ್ಷಕ ವೃಂದಕ್ಕೆ ಇಡೀ ಸಮಾಜ ಸಲ್ಲಿಸುತ್ತಿರುವ ಕೃತಜ್ಞತೆ. ಇಂದಿನಿಂದ ರಾಜ್ಯದ ಪ್ರತಿಯೊಬ್ಬ ಶಿಕ್ಷಕರು ಹೆಮ್ಮೆಯಿಂದ ತಮ್ಮ ಹೆಸರಿನ ಮುಂದೆ Tr. ಎಂದು ಬಳಸಿಕೊಳ್ಳಿ” ಎಂದು ಸಿಎಂ ಡಿ.ಕೆ. ಶಿವಕುಮಾರ್ ಕರೆ ನೀಡಿದ್ದಾರೆ.


