ಮಂಗಳೂರು: ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ಮೊಸರುಕುಡಿಕೆ ಸಂಭ್ರಮದ ಪ್ರಯುಕ್ತ ಸೆಪ್ಟೆಂಬರ್ 5ರಂದು ಮಂಗಳೂರಿನ ವಿವಿಧ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆಗಳು ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದ್ದು, ಸಾರ್ವಜನಿಕರ ಅನುಕೂಲಕ್ಕಾಗಿ ಮಂಗಳೂರು ನಗರ ಪೊಲೀಸ್ ಇಲಾಖೆಯು ಪರ್ಯಾಯ ವಾಹನ ಸಂಚಾರ ಮಾರ್ಗಗಳನ್ನು ನಿಗದಿಪಡಿಸಿದೆ.
ತೊಕ್ಕೊಟ್ಟು ಒಳಪೇಟೆ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ-66ರ ತೊಕ್ಕೊಟ್ಟು ಜಂಕ್ಷನ್ನಿಂದ ಕೊಲ್ಯ ಜಂಕ್ಷನ್ವರೆಗಿನ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆಯಿದ್ದು, ತಲಪಾಡಿ ಕಡೆಗೆ ಹೋಗುವ ವಾಹನಗಳು ತೊಕ್ಕೊಟ್ಟು ಜಂಕ್ಷನ್ನಲ್ಲಿ ಸರ್ವಿಸ್ ರಸ್ತೆಗೆ ತಿರುಗಿ ದೇರಳಕಟ್ಟೆ, ಮಡ್ಯಾರ್, ಮಾಡೂರು ಮತ್ತು ಬೀರಿಕೋಟೇಕಾರ್ ಜಂಕ್ಷನ್ ಮೂಲಕ ಸಂಚರಿಸಬೇಕಾಗಿದೆ. ಹಾಗೆಯೇ, ತೊಕ್ಕೊಟ್ಟು ಜಂಕ್ಷನ್ನಿಂದ ಉಳ್ಳಾಲ ಅಬ್ಬಕ್ಕ ವೃತ್ತಕ್ಕೆ ಸಾಗುವ ವಾಹನಗಳು ಬೀರಿಕೋಟೇಕಾರ್-ಸೋಮೇಶ್ವರ ಮಾರ್ಗವನ್ನು ಬಳಸಬಹುದು.
ಇನ್ನು ಕದ್ರಿ ಗೋಪಾಲಕೃಷ್ಣ ಮಠ ಹಾಗೂ ಕದ್ರಿ ಕಂಬಳ ಪ್ರದೇಶದ ಬಟ್ಟಗುಡ್ಡೆ ಜಂಕ್ಷನ್ನಿಂದ ಭಾರತ್ ಬೀಡಿವರೆಗಿನ ರಸ್ತೆಯಲ್ಲಿ ವಾಹನಗಳ ದಟ್ಟಣೆ ತಪ್ಪಿಸಲು ಬಟ್ಟಗುಡ್ಡೆಯಿಂದ ಬಿಜೈ ಜಂಕ್ಷನ್, ಪಿಂಟೋ ಬೇಕರಿ ಮತ್ತು ಕರಂಗಲಪಾಡಿ ಮಾರ್ಗವಾಗಿ ಹಾಗೂ ಭಾರತ್ ಬೀಡಿಯಿಂದ ಮಲ್ಲಿಕಟ್ಟೆ-ನಂತೂರು ಮಾರ್ಗವಾಗಿ ಸಂಚರಿಸಲು ಸೂಚಿಸಲಾಗಿದೆ. ಅತ್ತಾವರದ ಶ್ರೀ ಅರಸು ಮುಂಡತ್ತಾಯ ಮೈದಾನದ ಸುತ್ತಮುತ್ತ ಸಂಚಾರ ಸುಗಮಗೊಳಿಸಲು ಕೋಟಿಚೆನ್ನಯ ವೃತ್ತದಿಂದ ಬರುವ ವಾಹನಗಳನ್ನು ವೆಲೆನ್ಸಿಯಾ ಮಾರ್ಗಕ್ಕೆ ಹಾಗೂ ಅತ್ತಾವರ ಕಡೆಯಿಂದ ಬರುವ ವಾಹನಗಳನ್ನು ಆನಂದ ಶೆಟ್ಟಿ ವೃತ್ತದಿಂದ ಎಸ್.ಎಲ್. ಮಥಾಯಸ್ ರಸ್ತೆ ಮತ್ತು ಹೈಲ್ಯಾಂಡ್ ಜಂಕ್ಷನ್ ಕಡೆಗೆ ಹಾದಿ ಬದಲಾಯಿಸಲಾಗಿದೆ.
ಕೊಟ್ಟಾರ ಪ್ರದೇಶದ ಕೊಟ್ಟಾರ ಚೌಕಿಯಿಂದ ಉರ್ವಸ್ಟೋರ್ ಜಂಕ್ಷನ್ ವರೆಗೆ ಸಂಚಾರ ನಿಯಂತ್ರಿಸಲು, ಲಾಲ್ಬಾಗ್ನಿಂದ ಬರುವ ವಾಹನಗಳನ್ನು ಕೆ.ಎಸ್.ಆರ್.ಟಿ.ಸಿ.-ಕುಂಟಿಕಾನ ಮಾರ್ಗವಾಗಿ ಕಳುಹಿಸಲಾಗುತ್ತದೆ. ಕೊಟ್ಟಾರ ಚೌಕಿಯಿಂದ ಲಾಲ್ಬಾಗ್ ಕಡೆಗೆ ಹೋಗುವ ಲಘು ವಾಹನಗಳು ಕುಂಟಿಕಾನ, ಬಿಜೈ ಹಾಗೂ ಕೆ.ಎಸ್.ಆರ್.ಟಿ.ಸಿ. ಮಾರ್ಗವನ್ನು ಬಳಸಬೇಕು ಮತ್ತು ಘನ ವಾಹನಗಳು ಕುಂಟಿಕಾನ-ಕೆ.ಪಿ.ಟಿ. ವೃತ್ತದ ಮಾರ್ಗವಾಗಿ ಚಲಿಸಬೇಕು. ಮೆರವಣಿಗೆ ಸಾಗುವ ರಸ್ತೆಗಳಲ್ಲಿ ವಾಹನಗಳ ನಿಲುಗಡೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಸಾರ್ವಜನಿಕರು ಹಾಗೂ ಚಾಲಕರು ಸಂಚಾರ ದಟ್ಟಣೆ ತಪ್ಪಿಸಲು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕೆಂದು ನಗರ ಪೊಲೀಸ್ ಆಯುಕ್ತರು ಕೋರಿದ್ದಾರೆ.


