ಮಂಗಳೂರು: ಮಂಗಳೂರು ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಆಂಧ್ರಪ್ರದೇಶ ಮೂಲದ ಮೀನುಗಾರ ಭಕ್ತನಿ ಕಿಶೋರ್ (19) ಸಮುದ್ರಕ್ಕೆ ಬಿದ್ದು ನಾಪತ್ತೆಯಾಗಿದ್ದು, ಈ ಸಂಬಂಧ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಒಂದು ತಿಂಗಳ ಹಿಂದಷ್ಟೇ ಮೀನುಗಾರಿಕೆ ಕೆಲಸಕ್ಕೆ ಸೇರಿಕೊಂಡಿದ್ದ ಕಿಶೋರ್, ಮೊಹಮ್ಮದ್ ಫೈಜಲ್ ಅವರಿಗೆ ಸೇರಿದ ದೋಣಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ.
ಆಗಸ್ಟ್ 23 ರಂದು ಬೆಳಗಿನ ಜಾವ 3 ಗಂಟೆಗೆ 12 ಜನರಿದ್ದ ತಂಡವು ದೋಣಿಯಲ್ಲಿ ಮೀನುಗಾರಿಕೆಗೆ ತೆರಳಿತ್ತು. ಆಗಸ್ಟ್ 25 ರಂದು ಬೆಳಿಗ್ಗೆ 5 ಗಂಟೆ ಸುಮಾರಿಗೆ ಕಿಶೋರ್ ಹಗ್ಗದ ನೆರವಿನಿಂದ ದೋಣಿಯ ಅಂಚಿನಲ್ಲಿ ಕುಳಿತಿದ್ದಾಗ, ಬಲವಾಗಿ ಬಂದ ಸಮುದ್ರದ ಅಲೆಯ ಹೊಡೆತಕ್ಕೆ ಆಯತಪ್ಪಿ ನೀರಿಗೆ ಬಿದ್ದಿದ್ದಾನೆ. ತಕ್ಷಣವೇ ದೋಣಿಯಲ್ಲಿದ್ದ ಸಹೋದ್ಯೋಗಿಗಳು ಹಾಗೂ ಹತ್ತಿರದಲ್ಲಿದ್ದ ಇತರ ದೋಣಿಗಳಲ್ಲಿದ್ದವರು ಸಮುದ್ರಕ್ಕೆ ಬಲೆ ಬೀಸಿ ತೀವ್ರ ಹುಡುಕಾಟ ನಡೆಸಿದರೂ ಆತನ ಸುಳಿವು ಸಿಗಲಿಲ್ಲ. ಕಿಶೋರ್ ಅವರ ತಂದೆ ನೀಡಿದ ದೂರಿನನ್ವಯ ಪಾಂಡೇಶ್ವರ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.


