ಬೆಳಗಾವಿ: ಸಚಿವ ಸ್ಥಾನ ತಪ್ಪಿದರೂ ಪಕ್ಷದ ನಿರ್ಧಾರಕ್ಕೆ ಬದ್ಧವಾಗಿರುವುದಾಗಿ ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜಕೀಯ ಬೆಳವಣಿಗೆಗಳ ಕುರಿತು ಮುಕ್ತವಾಗಿ ತಮ್ಮ ಅಭಿಪ್ರಾಯ ಹಂಚಿಕೊಂಡರು.
ಕಳೆದ ಮೂರು ವರ್ಷಗಳ ಕಾಲ ಸಚಿವೆಯಾಗಿ ಉತ್ತಮವಾಗಿ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಅಭಿನಂದನೆ ಸಲ್ಲಿಸಿದ ಅವರು, ಪಕ್ಷ ಮತ್ತೆ ಅವಕಾಶ ನೀಡಿದರೆ ಜವಾಬ್ದಾರಿ ನಿಭಾಯಿಸುತ್ತೇನೆ, ಇಲ್ಲದಿದ್ದರೆ ಪಕ್ಷದ ಶಿಸ್ತಿನ ಸಿಪಾಯಿಯಾಗಿ ಕೆಲಸ ಮುಂದುವರಿಸುತ್ತೇನೆ ಎಂದರು.
ಮಹಿಳೆಯರ ಪ್ರಾತಿನಿಧ್ಯವಿಲ್ಲದ ಸಚಿವ ಸಂಪುಟ ನಿಜಕ್ಕೂ ಅಪೂರ್ಣ. ಯಾರಿಗೇ ಆಗಲಿ ಸಂಪುಟದಲ್ಲಿ ಮಹಿಳೆಯರಿಗೆ ಸೂಕ್ತ ಅವಕಾಶ ನೀಡಬೇಕು ಎಂದು ಆಗ್ರಹಿಸಿದ ಅವರು, ಈ ಬಗ್ಗೆ ಮುಖ್ಯಮಂತ್ರಿಗಳು ಶೀಘ್ರವೇ ಭರವಸೆ ಈಡೇರಿಸುವ ವಿಶ್ವಾಸ ವ್ಯಕ್ತಪಡಿಸಿದರು.
ತಮಗೆ ಮಂತ್ರಿ ಸ್ಥಾನ ತಪ್ಪಲು ಯಾವುದೇ ಆಂತರಿಕ ಷಡ್ಯಂತ್ರ ಕಾರಣವಲ್ಲ, ಕೆಲವೊಂದು ಅನಿವಾರ್ಯ ಕಾರಣಗಳಿಂದಾಗಿ ಈ ಸಂದರ್ಭ ಎದುರಾಗಿದೆ. ರಾಜಕಾರಣದಲ್ಲಿ ಇಂತಹ ಸವಾಲುಗಳು ಸಹಜ, ಇವುಗಳನ್ನು ಮೆಟ್ಟಿ ನಿಲ್ಲಬೇಕು ಎಂದು ಸ್ಪಷ್ಟಪಡಿಸಿದರು.
ಸಚಿವ ಸ್ಥಾನಕ್ಕಾಗಿ ತಾನು ಯಾರ ಬಳಿಯೂ ಕೇಳಿಲ್ಲ ಎಂದ ಲಕ್ಷ್ಮೀ ಹೆಬ್ಬಾಳ್ಕರ್, 34 ಸ್ಥಾನಗಳಲ್ಲಿ ಪ್ರಾದೇಶಿಕ, ಜಾತಿ ಮತ್ತು ಅನುಭವದ ಲೆಕ್ಕಾಚಾರಗಳು ಇರುತ್ತವೆ. ಮುಂಬರುವ ದಿನಗಳಲ್ಲಿ ಕೇವಲ ತಮ್ಮ ಕ್ಷೇತ್ರಕ್ಕೆ ಸೀಮಿತವಾಗದೆ, ಇಡೀ ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷಕ್ಕೆ ಹಾಗೂ ಮುಖ್ಯಮಂತ್ರಿಗಳಿಗೆ ಶಕ್ತಿ ತುಂಬುವ ಕೆಲಸ ಮಾಡುವುದಾಗಿ ತಿಳಿಸಿದರು.


