Thursday, August 27, 2026
Homeಕರಾವಳಿಉಡುಪಿಉಡುಪಿ ಮನೆಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು: ಇಬ್ಬರ ಬಂಧನ; ₹23.56 ಲಕ್ಷ ಮೌಲ್ಯದ ಸೊತ್ತು ವಶ

ಉಡುಪಿ ಮನೆಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು: ಇಬ್ಬರ ಬಂಧನ; ₹23.56 ಲಕ್ಷ ಮೌಲ್ಯದ ಸೊತ್ತು ವಶ

- Advertisement -
- Advertisement -

ಉಡುಪಿ ನಗರ ಠಾಣೆ ಪೊಲೀಸರು ಬೀಗ ಹಾಕಿದ ಮನೆಗಳನ್ನೇ ಗುರಿಯಾಗಿಸಿಕೊಂಡು ಕಳ್ಳತನ ನಡೆಸುತ್ತಿದ್ದ ಅರುಣ್ ಆಚಾರಿ ಎಸ್.ವಿ. (43) ಮತ್ತು ಕೌಶಿಕ್ (19) ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿ, ಒಟ್ಟು ₹23,56,230 ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ಅವರ ಮಾರ್ಗದರ್ಶನದಲ್ಲಿ ಹಾಗೂ ಪಿಎಸ್‌ಐ ಪ್ರಕಾಶ್ ನೇತೃತ್ವದಲ್ಲಿ ರಚನೆಯಾಗಿದ್ದ ವಿಶೇಷ ಪೊಲೀಸ್ ತಂಡವು ಲಭಿಸಿದ ಖಚಿತ ಮಾಹಿತಿ ಮೇರೆಗೆ ಆಗಸ್ಟ್ 23 ರಂದು ಪೆರಂಪಳ್ಳಿ ಸಂತೋಷನಗರದಲ್ಲಿ ಈ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ದುಬೈನಲ್ಲಿ ನೆಲೆಸಿದ್ದ ಪುತ್ತೂರು ಗ್ರಾಮದ ಭಗವತಿ ಲೇಔಟ್‌ನ ಮಹಿಳೆಯೊಬ್ಬರು ಊರಿಗೆ ಬಂದಿದ್ದಾಗ ಈ ಕಳ್ಳತನ ನಡೆದಿತ್ತು. ಗಂಡ ವಿದೇಶಕ್ಕೆ ತೆರಳಿದ ಬಳಿಕ ಅವರು ಆಗಸ್ಟ್ 8ರಂದು ಸಂಬಂಧಿಕರ ಮನೆಗೆ ತೆರಳಿದ್ದು, ಆಗಸ್ಟ್ 11ರಂದು ವಾಪಸ್ ಬಂದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿತ್ತು. ಕಳ್ಳರು ಟೆರೇಸ್ ಬಾಗಿಲನ್ನು ಮುರಿದು ಒಳನುಗ್ಗಿ, ಕಪಾಟಿನಲ್ಲಿದ್ದ 10,000 ಎಇಡಿ (AED) ವಿದೇಶಿ ಕರೆನ್ಸಿ ಹಾಗೂ ₹14,000 ನಗದನ್ನು ದೋಚಿದ್ದರು. ಈ ಕುರಿತು ಉಡುಪಿ ನಗರ ಠಾಣೆಯಲ್ಲಿ ದೂರು ದಾಖಲಾದ ತಕ್ಷಣ ಪೊಲೀಸರು ತನಿಖೆ ಚುರುಕುಗೊಳಿಸಿದ್ದರು.

ಬಂಧಿತ ಆರೋಪಿಗಳಿಂದ ಪೊಲೀಸರು ₹13.26 ಲಕ್ಷ ಮೌಲ್ಯದ 88.400 ಗ್ರಾಂ ಚಿನ್ನ, ₹4 ಲಕ್ಷ ಮೌಲ್ಯದ ಆಟೋರಿಕ್ಷಾ, ₹2.86 ಲಕ್ಷ ಮೌಲ್ಯದ 1 ಕೆಜಿ 360 ಗ್ರಾಂ ಬೆಳ್ಳಿ ಆಭರಣಗಳು ಹಾಗೂ ₹2 ಲಕ್ಷ ಮೌಲ್ಯದ ವಿದೇಶಿ ಕರೆನ್ಸಿಯನ್ನು ವಶಪಡಿಸಿಕೊಂಡಿದ್ದಾರೆ. ಇದರೊಂದಿಗೆ ₹45,000 ಮೌಲ್ಯದ ಕಳವು ಮಾಡಿದ ಪಲ್ಸರ್ ಬೈಕ್, ₹33,000 ನಗದು, ₹30,000 ಮೌಲ್ಯದ ವಿದೇಶಿ ಕೈಗಡಿಯಾರ, ₹22,500 ಮೌಲ್ಯದ 1.45 ಗ್ರಾಂ ಚಿನ್ನದ ನಾಣ್ಯಗಳು ಮತ್ತು ₹13,000 ಮೌಲ್ಯದ ಎರಡು ಮೊಬೈಲ್ ಫೋನ್‌ಗಳನ್ನು ಜಪ್ತಿ ಮಾಡಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಸದ್ಯ ಪೊಲೀಸ್ ಕಸ್ಟಡಿಯಲ್ಲಿ ಹೆಚ್ಚಿನ ವಿಚಾರಣೆ ಒಳಪಡಿಸಲಾಗಿದೆ.

- Advertisement -

Latest News

error: Content is protected !!