Monday, August 24, 2026
Homeಕರಾವಳಿಮಂಗಳೂರುಫಾರ್ಚೂನರ್ ಕಾರಿದ್ದರೂ ಬಿಡದ ಕಾಯಕ: ಬಿ.ಸಿ. ರೋಡ್‌ನ ಸ್ವಚ್ಛತಾ ಕಾವಲುಗಾರನ ಸ್ಫೂರ್ತಿದಾಯಕ ಕಥೆ

ಫಾರ್ಚೂನರ್ ಕಾರಿದ್ದರೂ ಬಿಡದ ಕಾಯಕ: ಬಿ.ಸಿ. ರೋಡ್‌ನ ಸ್ವಚ್ಛತಾ ಕಾವಲುಗಾರನ ಸ್ಫೂರ್ತಿದಾಯಕ ಕಥೆ

- Advertisement -
- Advertisement -

ಬಂಟ್ವಾಳ: ಪ್ರತಿದಿನ ಬೆಳಗಿನ ಜಾವ 5 ಗಂಟೆಗೆ ಐಷಾರಾಮಿ ಬಿಳಿ ಫಾರ್ಚೂನರ್ ಕಾರಿನಲ್ಲಿ ಬಂದು, ಕೈಯಲ್ಲಿ ಪೊರಕೆ ಹಿಡಿದು ರಸ್ತೆ ಸ್ವಚ್ಛಗೊಳಿಸುವ ಅಪರೂಪದ ವ್ಯಕ್ತಿಯೊಬ್ಬರು ಬಿ.ಸಿ. ರೋಡ್‌ನಲ್ಲಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಇವರೇ ಬಂಟ್ವಾಳ ಪುರಸಭೆಯ ಹಿರಿಯ ಪೌರಕಾರ್ಮಿಕ ಸೇಸಪ್ಪ ನಾವೂರು (ಸೇಸಪ್ಪಣ್ಣ).

1996ರಲ್ಲಿ 3ನೇ ತರಗತಿ ವಿದ್ಯಾರ್ಹತೆಯೊಂದಿಗೆ ದಿನಕ್ಕೆ ಕೇವಲ 50 ರೂಪಾಯಿ ದಿನಗೂಲಿಗೆ ಕೆಲಸಕ್ಕೆ ಸೇರಿದ ಸೇಸಪ್ಪಣ್ಣ ಅವರಿಗೆ ಕಾರುಗಳೆಂದರೆ ವಿಶೇಷ ಪ್ರೀತಿ. ಸೈಕಲ್‌ನಲ್ಲಿ ಸಂಚರಿಸುತ್ತಿದ್ದ ದಿನಗಳಲ್ಲೇ ಕಾರು ಕೊಳ್ಳುವ ಕನಸು ಕಂಡಿದ್ದ ಇವರು, ಸಣ್ಣ ಸಣ್ಣ ಉಳಿತಾಯ ಮಾಡಿ ಮಾರುತಿ 800, ಓಮ್ನಿ, ರಿಟ್ಜ್, ಆಲ್ಟೋ ಹಾಗೂ ಸ್ಕಾರ್ಪಿಯೋ ಕಾರುಗಳನ್ನು ಒಂದೊಂದಾಗಿ ಖರೀದಿಸಿದ್ದರು. ಇತ್ತೀಚೆಗೆ ತಮ್ಮ ಆಲ್ಟೋ ಮತ್ತು ಸ್ಕಾರ್ಪಿಯೋ ಮಾರಿ, ಸ್ವಲ್ಪ ಸಾಲ ಮಾಡಿ ತಮ್ಮ ಕನಸಿನ ಫಾರ್ಚೂನರ್ ಕಾರನ್ನು ಖರೀದಿಸಿದ್ದಾರೆ.

2005ರಲ್ಲಿ ಪೊಲೀಸ್ ಎಸ್‌ಐ ಬೆಳ್ಳಿಯಪ್ಪ ಅವರ ಸಲಹೆಯಂತೆ ಕುಡಿತ ಸಂಪೂರ್ಣವಾಗಿ ತ್ಯಜಿಸಿದ ಇವರು, ಬದುಕಿನಲ್ಲಿ ಕಠಿಣ ಶ್ರಮಕ್ಕೆ ಒತ್ತು ನೀಡಿದರು. 30 ವರ್ಷಗಳಿಂದ ಪೌರಕಾರ್ಮಿಕರಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಸೇಸಪ್ಪಣ್ಣ, ಸ್ವಚ್ಛತಾ ಕಾರ್ಯದ ಜೊತೆಗೆ ಕೃಷಿ, ಹೈನುಗಾರಿಕೆ, ಕೂಲಿ ಕೆಲಸ ಹಾಗೂ ದೈವನರ್ತನ ಸೇವೆಯನ್ನೂ ನಡೆಸುತ್ತಿದ್ದಾರೆ.

“ಯಾವ ಕೆಲಸವೂ ಸಣ್ಣದಲ್ಲ, ಯಾವುದೂ ದೊಡ್ಡದಲ್ಲ. ನನ್ನ ವೃತ್ತಿಗೆ ಬದ್ಧತೆಯಿಂದ ಕೆಲಸ ಮಾಡುತ್ತಿದ್ದೇನೆ” ಎಂದು ಹೆಮ್ಮೆಯಿಂದ ಹೇಳುವ ಸೇಸಪ್ಪಣ್ಣ, ಐಷಾರಾಮಿ ಕಾರು ಬಂದರೂ ಲವಲೇಶವೂ ಅಹಂಕಾರ ತೋರದೆ ಕಾಯಕ ಗೌರವ ಎತ್ತಿಹಿಡಿದ ಮಾದರಿ ವ್ಯಕ್ತಿಯಾಗಿದ್ದಾರೆ. ಪುರಸಭೆ ಮುಖ್ಯಾಧಿಕಾರಿ ತೀರ್ಥಪ್ರಸಾದ್ ಸೇರಿದಂತೆ ಪ್ರತಿಯೊಬ್ಬರೂ ಇವರ ಕಾಯಕ ನಿಷ್ಠೆಯನ್ನು ಶ್ಲಾಘಿಸಿದ್ದಾರೆ.

- Advertisement -

Latest News

error: Content is protected !!