ಬೆಂಗಳೂರು: ರಾಜ್ಯದ ವಿವಿಧ ಕೇಂದ್ರ ಕಾರಾಗೃಹಗಳಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಸನ್ನಡತೆ ಹೊಂದಿರುವ ಅರ್ಹ ಬಂಧಿಗಳ ಪೈಕಿ 28 ಮಂದಿಯನ್ನು ಅವಧಿಪೂರ್ವ ಬಿಡುಗಡೆ ಮಾಡಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
ಒಟ್ಟು 45 ಪ್ರಕರಣಗಳ ಪೈಕಿ 28 ಜೀವಾವಧಿ ಶಿಕ್ಷಾ ಬಂಧಿಗಳನ್ನು ಸನ್ನಡತೆ ಆಧಾರದ ಮೇಲೆ ಅವಧಿಪೂರ್ವ ಬಿಡುಗಡೆ ಮಾಡಲು ಸಚಿವ ಸಂಪುಟ ಅನುಮೋದನೆ ನೀಡಿದೆ. ಮತ್ತೊಂದು ಪ್ರಕರಣವನ್ನು ಕೇಂದ್ರ ಗೃಹ ಸಚಿವಾಲಯದ ಸಹಮತಿ ಪಡೆದು ಅವಧಿಪೂರ್ವ ಬಿಡುಗಡೆ ಮಾಡಲು ಅನುಮೋದಿಸಲಾಗಿದೆ. ಹೀಗಾಗಿ ಒಟ್ಟು 29 ಜೀವಾವಧಿ ಶಿಕ್ಷಾ ಬಂಧಿಗಳು ಅವಧಿಪೂರ್ವ ಬಿಡುಗಡೆಗೆ ಅರ್ಹರಾಗಿದ್ದಾರೆ.
ರಾಜ್ಯದ ವಿವಿಧ ಕೇಂದ್ರ ಕಾರಾಗೃಹಗಳಲ್ಲಿರುವ ಜೀವಾವಧಿ ಶಿಕ್ಷಾ ಬಂಧಿಗಳ ಅವಧಿಪೂರ್ವ ಬಿಡುಗಡೆಗೆ ಸಂಬಂಧಿಸಿದಂತೆ ಒಟ್ಟು 45 ಪ್ರಕರಣಗಳನ್ನು ಪರಿಶೀಲಿಸಲಾಗಿತ್ತು. ಸರ್ಕಾರದ ಮಾರ್ಗಸೂಚಿಗಳು, ಬಂಧಿಗಳ ಸನ್ನಡತೆ, ಜೈಲು ವಾಸದ ಅವಧಿ ಸೇರಿದಂತೆ ನಿಗದಿತ ಮಾನದಂಡಗಳ ಆಧಾರದ ಮೇಲೆ ಪ್ರಕರಣಗಳನ್ನು ಪರಿಶೀಲಿಸಲಾಗಿದೆ.
ಸಚಿವ ಸಂಪುಟದ ನಿರ್ಧಾರವನ್ನು ರಾಜ್ಯಪಾಲರ ಅನುಮೋದನೆಗಾಗಿ ಕಳುಹಿಸಲಾಗುವುದು ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.


