ಬೆಳ್ತಂಗಡಿ : ಅಳದಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಿಲ್ಯ ಗ್ರಾಮದ ಐತಿಹಾಸಿಕ ಬರಾಯಕೆರೆ ಎಂಬಲ್ಲಿ ಕಪ್ಪು ಕಲ್ಲಿನ ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ಬರಾಯಕೆರೆ ಸಂರಕ್ಷಣಾ ಸಮಿತಿ ಜಿಲ್ಲಾಧಿಕಾರಿ ದರ್ಶನ್ ಹೆಚ್ ವಿ ರವರಿಗೆ ಆ.20 ರಂದು ಮನವಿ ಸಲ್ಲಿಸಿದ ಬೆನ್ನಲ್ಲೇ ಬೆಳ್ತಂಗಡಿ ತಹಶೀಲ್ದಾರ್ ಎನ್.ಎಸ್ ನರಗುಂದ ಆ.21 ರಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸ್ಥಳೀಯ ಭೂಮಾಲೀಕ , ನ್ಯಾಯವಾದಿಯಾಗಿರುವ ಶ್ರೀಕಾಂತ್ ಭಟ್ ಎಂಬವರು ಕೃಷಿ ಚಟುವಟಿಕೆ ಕಾರಣ ನೀಡಿ ಕಳೆದ 25 ಕ್ಕೂ ಹೆಚ್ಚು ವರ್ಷಗಳಿಂದ ಸತತವಾಗಿ ಗಣಿಗಾರಿಕೆ ನಡೆಸುತ್ತಿದ್ದು , ಕಾನೂನು ಬಾಹಿರವಾಗಿ ಸ್ಫೋಟಕಗಳನ್ನು ಸ್ಫೋಟಿಸುತ್ತಿದ್ದಾರೆ, ಇದರಿಂದಾಗಿ ಶಾಲೆಯ ಮಕ್ಕಳು ಸೇರಿದಂತೆ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಸ್ಥಳೀಯರ ಮನೆಗಳು ಬಿರುಕು ಬಿಟ್ಟಿದೆ. ಕೃಷಿ ಕೃತಾವಳಿಗಳಿಗೆ ಕಲ್ಲು , ಕಲ್ಲಿನ ಪುಡಿಯಿಂದ ತೊಂದರೆಯಾಗಿದೆ. ಬೃಹತ್ ಗಾತ್ರದ ಲಾರಿಗಳ ಸಂಚಾರದಿಂದ ಗ್ರಾಮ ಪಂಚಾಯತ್ ರಸ್ತೆಗಳು , ಮೋರಿಗಳು ನಾಶಗೊಂಡಿದೆ. ಐತಿಹಾಸಿಕ ಬರಾಯಕೆರೆ ಸಂಪೂರ್ಣ ಕಲುಷಿತಗೊಂಡಿದೆ ಎಂದು ತಹಶೀಲ್ದಾರರ ಜೊತೆಗೆ ಸಾರ್ವಜನಿಕರು ತಮ್ಮ ಅಳಲು ತೋಡಿಕೊಂಡರು. ಈ ಸಂದರ್ಭದಲ್ಲಿ ಇನ್ನೊಮ್ಮೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳ ಜೊತೆಗೆ ಭೇಟಿ ನೀಡುವ ಬರವಸೆ ನೀಡಿದರು. ತಹಶೀಲ್ದಾರರ ಜೊತೆಗೆ ವೇಣೂರು ಹೋಬಳಿ ಕಂದಾಯ ನಿರೀಕ್ಷಕ ಕುಮಾರಸ್ವಾಮಿ , ಅಳದಂಗಡಿ ಗ್ರಾಮ ಪಂಚಾಯತ್ ಕಾರ್ಯದರ್ಶಿ ಪೂವಪ್ಪ ಮಲೆಕುಡಿಯ ಪಿಲ್ಯ ಗ್ರಾಮಾಡಳಿತಾಧಿಕಾರಿ ಭಾರತಿ ಇದ್ದರು.

ಈ ಸಂದರ್ಭದಲ್ಲಿ ಮಾಜಿ ತಾಲೂಕು ಪಂಚಾಯತ್ ಸದಸ್ಯ ಪ್ರಶಾಂತ್ ವೇಗಸ್ , ಬರಾಯಕೆರೆ ಸಂರಕ್ಷಣಾ ಸಮಿತಿ ಮುಖಂಡರಾದ ಲಿಯೋ ಪಿರೇರಾ , ಹರೀಶ್ ಪೂಜಾರಿ , ಗಣೇಶ್ ದೇವಾಡಿಗ , ಮೇಲ್ವಿನ್ ಡಿಸೋಜ , ಪ್ರವೀಣ್ ನಿನ್ನಿಕಲ್ಲು , ಜೋನ್ ಡಿಸೋಜ , ದಿನೇಶ್ ಪೂಜಾರಿ , ಪ್ರಶಾಂತ್ ಪೂಜಾರಿ ಕೂಸ ಅಳದಂಗಡಿ ಮತ್ತಿತರರು ಉಪಸ್ಥಿತರಿದ್ದರು.


