ಉಡುಪಿ: ಕಾಪು ತಾಲೂಕಿನ ಮುದರಂಗಡಿ ಜಂಕ್ಷನ್ನಲ್ಲಿ ನಡೆದ ಪ್ರಿನ್ಸ್ ಎಂಟರ್ಪ್ರೈಸಸ್ ಮಾಲಕ ಡೇವಿಡ್ ಡಿಸೋಜಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೃತ್ಯಕ್ಕೆ ಸಂಚು ರೂಪಿಸಿ ಹಣಕಾಸು ನೆರವು ನೀಡಿದ್ದ ಮತ್ತೋರ್ವ ಆರೋಪಿಯನ್ನು ಉಡುಪಿ ಪೊಲೀಸರು ಉತ್ತರಾಖಂಡದ ನೈನಿತಾಲ್ನಲ್ಲಿ ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಬಿಹಾರ ಮೂಲದ ಸೂರಜ್ ಕುಮಾರ್ (31) ಎಂದು ಗುರುತಿಸಲಾಗಿದ್ದು, ಈತನಿಂದ ಕೃತ್ಯಕ್ಕೆ ಬಳಸಿದ್ದ ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ. ಇದರೊಂದಿಗೆ ಈ ಕೊಲೆ ಪ್ರಕರಣದಲ್ಲಿ ಬಂಧಿತರಾದವರ ಒಟ್ಟು ಸಂಖ್ಯೆ 8ಕ್ಕೆ ಏರಿಕೆಯಾಗಿದೆ.
ಆಗಸ್ಟ್ 7ರಂದು ಮುದರಂಗಡಿಯ ಸೈಂಟ್ ಕ್ಷೇವಿಯರ್ ಚರ್ಚ್ ಕಾಂಪ್ಲೆಕ್ಸ್ನಲ್ಲಿರುವ ಕಚೇರಿಯಲ್ಲಿದ್ದ ಉದ್ಯಮಿ ಡೇವಿಡ್ ಡಿಸೋಜಾ ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಕೊಲೆ ಮಾಡಿದ್ದರು. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಕೃತ್ಯ ಎಸಗಿದ್ದ ಪ್ರಮುಖ ಆರೋಪಿ ರಾಜು, ಅನ್ಮೋಲ್ ರಸ್ತೋಗಿ ಹಾಗೂ ಜಿಯಾಹುಲ್ ವಾಜುಲ್ ಶೇಖ್ನನ್ನು ಪೊಲೀಸರು ಬಂಧಿಸಿದ್ದರು. ಈ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ ರಾಜು ಕಾಲಿಗೆ ಪೊಲೀಸರು ಗುಂಡು ಹಾರಿಸಿ ವಶಕ್ಕೆ ಪಡೆದಿದ್ದರು.
ಬಳಿಕ ತನಿಖೆ ತೀವ್ರಗೊಳಿಸಿದ ಪೊಲೀಸರು, ಹತ್ಯೆಗೆ ಒಳಸಂಚು ರೂಪಿಸಿ ಹಣಕಾಸಿನ ನೆರವು ನೀಡಿದ್ದ ಮೊಹಮ್ಮದ್ ಇರ್ಷಾದ್, ಚಿರಾಗ್ ಪೂಜಾರಿ, ಸದಾನಂದ ದೇವಾಡಿಗ ಹಾಗೂ ಕಿಶೋರ್ ರಾಮ ಪೂಜಾರಿಯನ್ನು ಬಂಧಿಸಿದ್ದರು. ಇದೀಗ ತಲೆಮರೆಸಿಕೊಂಡಿದ್ದ ಸೂರಜ್ ಕುಮಾರ್ನನ್ನು ನೈನಿತಾಲ್ನಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ


