
ಮಂಗಳೂರು: ಸುಮಾರು 15 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಎಲ್‌ಪಿಸಿ ವಾರೆಂಟ್ ಆರೋಪಿತೆಯನ್ನು ಮಂಗಳೂರು ನಗರ ಮಹಿಳಾ ಪೊಲೀಸ್ ಠಾಣೆಯ ಪೊಲೀಸರು ಪತ್ತೆಹಚ್ಚಿ ಬಂಧಿಸಿದ್ದಾರೆ.
ಮಂಗಳೂರು ನಗರ ಮಹಿಳಾ ಪೊಲೀಸ್ ಠಾಣೆಯಲ್ಲಿ 2011 ರಲ್ಲಿ ದಾಖಲಾಗಿದ್ದ ಅಕ್ರಮ ಮಾನವ ಸಾಗಾಟ ತಡೆ ಕಾಯ್ದೆ (Prevention of Immoral Traffic Act) ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತೆಯ ವಿರುದ್ಧ ಪ್ರಕರಣ ದಾಖಲಾಗಿತ್ತು. ಪ್ರಕರಣವು ಮಂಗಳೂರಿನ 3ನೇ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದ್ದು, SPLIT CC ನಂ.02/2014 ಹಾಗೂ LPC ನಂ.10/2019ರಂತೆ ದೀರ್ಘಕಾಲದಿಂದ ಬಾಕಿ ಉಳಿದಿತ್ತು.
ಆರೋಪಿತೆ ಆರಂಭದಲ್ಲಿ ತನ್ನ ಹೆಸರು ಹಾಗೂ ವಿಳಾಸವನ್ನು ತಪ್ಪಾಗಿ ನೀಡಿ, ಆಯಿಷಾ(36) ವರ್ಷ, ಗಂಡ ಹಸನಬ್ಬ, ಬಂಗ್ಲಗುಡ್ಡೆ ಮನೆ, ಗುರುಪುರ ಎಂದು ಸುಳ್ಳು ಮಾಹಿತಿ ನೀಡಿದ್ದಳು. ಬಳಿಕ ತನ್ನ ನಿಜವಾದ ಹೆಸರು ಸೆಫಿಯಾ(53) ವರ್ಷ, ಗಂಡ ದಿವಂಗತ ಅಬೂಬುಕ್ಕರ್, ಮೂಡಬಿದಿರೆ ತಾಲೂಕಿನ ಮಿಜಾರು ಗ್ರಾಮದ ವಿಳಾಸದಲ್ಲಿ ವಾಸವಾಗಿರುವುದು ಪೊಲೀಸರ ತನಿಖೆಯಿಂದ ಪತ್ತೆಯಾಗಿದೆ.ಆರೋಪಿತೆಯ ವಿರುದ್ಧ ನ್ಯಾಯಾಲಯದಿಂದ ಹಲವು ಬಾರಿ ಎಲ್‌ಪಿಸಿ ವಾರೆಂಟ್ ಜಾರಿಯಾಗಿದ್ದರೂ, ಆಕೆ ನ್ಯಾಯಾಲಯಕ್ಕೆ ಹಾಜರಾಗದೆ ಸುಮಾರು 15 ವರ್ಷಗಳಿಂದ ತಲೆಮರೆಸಿಕೊಂಡಿದ್ದಳು.
ಆರೋಪಿತೆಯ ಬೆರಳಚ್ಚನ್ನು ಬೆರಳಚ್ಚು ತಜ್ಞರು ಪರಿಶೀಲಿಸಿದಾಗ ಪ್ರಕರಣದ ಕಡತದಲ್ಲಿದ್ದ ಆಯಿಷಾ ಎಂಬ ಹೆಸರಿನ ವ್ಯಕ್ತಿಯ ಬೆರಳಚ್ಚಿನೊಂದಿಗೆ ಹೋಲಿಕೆಯಾಗಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಮಹಿಳಾ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆಗಸ್ಟ್ 18 ರಂದು ಆರೋಪಿತೆ ಸೆಫಿಯಾಳನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ. ಬಳಿಕ ಆರೋಪಿತೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು,ಮಾನ್ಯ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.


