
ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭೆಯ ಮಾಜಿ ಉಪಸಭಾಪತಿ ಹಾಗೂ ಹಿರಿಯ ರಾಜಕಾರಣಿ ಆಶಿಶ್ ಬ್ಯಾನರ್ಜಿ ಅವರು ರವಿವಾರ (ಆ.16) ಬೆಳಿಗ್ಗೆ ಬಿರ್ಭುಮ್ ಜಿಲ್ಲೆಯ ರಾಂಪುರ್ಹತ್‌ನ ಹಟ್ಟಲಪಾರದಲ್ಲಿರುವ ತೃಣಮೂಲ ಕಾಂಗ್ರೆಸ್ (TMC) ಕಚೇರಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಈ ಕಚೇರಿಯು ಅವರ ನಿವಾಸದ ಪಕ್ಕದಲ್ಲೇ ಇದ್ದು, ಘಟನೆಯ ಮಾಹಿತಿ ಹರಡುತ್ತಿದ್ದಂತೆ ಅಪಾರ ಸಂಖ್ಯೆಯಲ್ಲಿ ಬೆಂಬಲಿಗರು ಹಾಗೂ ಸಾರ್ವಜನಿಕರು ಸ್ಥಳದಲ್ಲಿ ಜಮಾಯಿಸಿದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದಾರೆ.
ರಾಂಪುರ್ಹತ್ ಕ್ಷೇತ್ರದಿಂದ ಐದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಆಶಿಶ್ ಬ್ಯಾನರ್ಜಿ ಅವರು, ಮಮತಾ ಬ್ಯಾನರ್ಜಿ ಮೊದಲ ಬಾರಿಗೆ ಮುಖ್ಯಮಂತ್ರಿಯಾದಾಗ ರಾಜ್ಯದ ಶಿಕ್ಷಣ ಮತ್ತು ಕೃಷಿ ಸಚಿವರಾಗಿ ಹಾಗೂ ನಂತರ ವಿಧಾನಸಭೆಯ ಉಪಸಭಾಪತಿಯಾಗಿ ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು. ಆದರೆ, ಈ ವರ್ಷದ ಆರಂಭದಲ್ಲಿ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಧ್ರುಬಾ ಸಹಾ ವಿರುದ್ಧ ಅವರು ಪರಾಜಯಗೊಂಡಿದ್ದರು. ಈ ರಾಜಕೀಯ ಹಿನ್ನಡೆಯ ಬಳಿಕ ಜೂನ್‌ನಲ್ಲಿ ಅವರು ಬಿರ್ಭುಮ್ ಜಿಲ್ಲಾ ಕೋರ್ ಕಮಿಟಿಯ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದರೂ, ತೃಣಮೂಲ ಕಾಂಗ್ರೆಸ್‌ನ ಸಾಮಾನ್ಯ ಸದಸ್ಯರಾಗಿ ಮುಂದುವರಿಯುವುದಾಗಿ ತಿಳಿಸಿದ್ದರು.


