
ಬಂಟ್ವಾಳ: ಯಕ್ಷಗಾನ ರಂಗದ ಹಿರಿಯ ಪ್ರಸಂಗಕರ್ತ, ಭಾಗವತ ಹಾಗೂ ಕಲಾವಿದ ಬೋಳೂರು ಮಧು ಕುಮಾರ್ (86) ಅವರು ಅಲ್ಪಕಾಲದ ಅಸೌಖ್ಯದಿಂದ ಶನಿವಾರ ಸಂಜೆ ಬಂಟ್ವಾಳದ ನರಿಕೊಂಬಿನಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾದರು.
ಯಕ್ಷಗಾನದ ಹಿರಿಯ ಸಂಘಟಕ ದಿ. ಬೋಳೂರು ದೋಗ್ರ ಪೂಜಾರಿ ಅವರ ಪುತ್ರರಾದ ಇವರು, ಕನ್ನಡ ಮತ್ತು ತುಳು ಯಕ್ಷಗಾನ ಕ್ಷೇತ್ರದಲ್ಲಿ ಜನಪ್ರಿಯ ಪ್ರಸಂಗಕರ್ತರಾಗಿ ಪ್ರಸಿದ್ಧಿ ಪಡೆದಿದ್ದರು. ಅವರು ರಚಿಸಿದ “ಸುದರ್ಶನ ವಿಜಯ” ಪ್ರಸಂಗವು ಕಳೆದ ಐದು ದಶಕಗಳಿಂದ ವೃತ್ತಿಮೇಳ ಹಾಗೂ ಹವ್ಯಾಸಿ ರಂಗದಲ್ಲಿ ಅತ್ಯಂತ ಜನಪ್ರಿಯವಾಗಿ ಪ್ರದರ್ಶನಗೊಳ್ಳುತ್ತಾ ಬಂದಿದೆ. ಇದರೊಂದಿಗೆ ಕಡುಗಲಿ ಕುಮಾರರಾಮ, ಏಕಾದಶಿ ದೇವಿ ಮಹಾತ್ಮೆ, ಬಾಲೆ ನಾಗಮ್ಮ, ಶ್ರೀ ಸತ್ಯನಾರಾಯಣ ವ್ರತ ಮಹಾತ್ಮೆ ಮತ್ತು ತುಳುವಿನ ‘ಕೋಟಿ ಚೆನ್ನಯ’ ಸೇರಿದಂತೆ ಹಲವು ಯಶಸ್ವಿ ಪ್ರಸಂಗಗಳನ್ನು ಅವರು ರಚಿಸಿದ್ದಾರೆ.
ಖ್ಯಾತ ಸಾಹಿತಿ ದಿ. ವಿಶು ಕುಮಾರ್ ಹಾಗೂ ಸಂಘಟಕ ದಿ. ದಾಮೋದರ ನಿಸರ್ಗ ಅವರ ಸಹೋದರರಾಗಿದ್ದ ಮಧು ಕುಮಾರ್ ಅವರು ಭಾಗವತರಾಗಿಯೂ ವಿವಿಧ ಮೇಳಗಳಲ್ಲಿ ಸುದೀರ್ಘ ಕಾಲ ತಿರುಗಾಟ ನಡೆಸಿದ್ದರು. ಜೊತೆಗೆ ಯಕ್ಷಗಾನ ವೇಷಭೂಷಣ ಪೂರೈಕೆ ವ್ಯವಸ್ಥೆಯನ್ನೂ ನಡೆಸುತ್ತಿದ್ದ ಇವರು ಬಹುಮುಖ ಕಲಾವಿದರಾಗಿದ್ದರು. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.


