Saturday, August 8, 2026
Homeಕರಾವಳಿಉಡುಪಿಡೇವಿಡ್‌ ಡಿಸೋಜ ಶೂಟೌಟ್ ಪ್ರಕರಣ: ಪೋಲಿಸರ ಮೇಲೆ ಹಲ್ಲೆ ನಡೆಸಿ ಓಡಲು ಯತ್ನಿಸಿದ ಆರೋಪಿಯ ಕಾಲಿಗೆ...

ಡೇವಿಡ್‌ ಡಿಸೋಜ ಶೂಟೌಟ್ ಪ್ರಕರಣ: ಪೋಲಿಸರ ಮೇಲೆ ಹಲ್ಲೆ ನಡೆಸಿ ಓಡಲು ಯತ್ನಿಸಿದ ಆರೋಪಿಯ ಕಾಲಿಗೆ ಗುಂಡೇಟು

- Advertisement -
- Advertisement -

ಉಡುಪಿ: ಜಿಲ್ಲೆಯ ಕಾಪು ತಾಲೂಕಿನ ಮುದ್ದುರಂಗಡಿ ಪೇಟೆಯಲ್ಲಿ ಹಾಡಹಗಲೇ ಡೇವಿಡ್‌ ಡಿಸೋಜ ಅವರನ್ನು ಕೊಲೆಗೈದು ಪರಾರಿಯಾಗಿದ್ದ ಪ್ರಮುಖ ಆರೋಪಿ ಉತ್ತರಪ್ರದೇಶ ಮೂಲದ ರಾಜು ಎಂಬಾತನನ್ನು ಪೊಲೀಸರು ಶೀಘ್ರ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಆರೋಪಿಯನ್ನು ಕರೆತರುವಾಗ ಆತ ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ತಲೆಮರೆಸಿಕೊಳ್ಳಲು ಯತ್ನಿಸಿದ್ದು, ಈ ವೇಳೆ ಪೋಲಿಸರು ಪಿಸ್ತೂಲ್ ನಿಂದ ಗುಂಡು ಹಾರಿಸಿ ಆತನನ್ನು ಸೆರೆಹಿಡಿದಿದ್ದಾರೆ.

ಬಂಧಿತ ಆರೋಪಿ ರಾಜು ಮುದ್ದುರಂಗಡಿಯಲ್ಲಿ ಡೇವಿಡ್‌ ಡಿಸೋಜ ಅವರನ್ನು ಕೊಲೆ ಮಾಡಿ ತಲೆಮರೆಸಿಕೊಂಡಿದ್ದ. ಘಟನೆ ನಡೆದ ತಕ್ಷಣ ಕಾರ್ಯಪ್ರವೃತ್ತರಾದ ಕಾಪು ಪಿಎಸ್‌ಐ ತೇಜಸ್ವಿ ಹಾಗೂ ಕಾರ್ಕಳ ಗ್ರಾಮಾಂತರ ಪಿಎಸ್‌ಐ ಪ್ರಸನ್ನ ಅವರ ನೇತೃತ್ವದ ಜಂಟಿ ಪೊಲೀಸ್ ತಂಡವು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆಯಿತು.

ಆರೋಪಿಯನ್ನು ಸ್ಥಳ ಮಹಜರು ಹಾಗೂ ಮುಂದಿನ ಕಾನೂನು ಕ್ರಮಕ್ಕಾಗಿ ಕರೆತರುತ್ತಿದ್ದಾಗ, ಬೈಂದೂರು ಸಮೀಪದ ಒತ್ತಿನೆಣೆ ಎಂಬಲ್ಲಿ ಆರೋಪಿ ರಾಜು ದಿಢೀರ್ ಆಗಿ ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ಕಾಪು ಪಿಎಸ್‌ಐ ತೇಜಸ್ವಿ ಅವರು ಆತ್ಮರಕ್ಷಣೆಗಾಗಿ ಮತ್ತು ಆರೋಪಿಯ ಬಂಧನಕ್ಕಾಗಿ ತಮ್ಮ ಸರ್ವೀಸ್ ಪಿಸ್ತೂಲಿನಿಂದ ಆತನ ಕಾಲಿಗೆ ಗುಂಡು ಹಾರಿಸಿದ್ದಾರೆ.

ಆರೋಪಿಯ ದಿಢೀರ್ ದಾಳಿಯಿಂದಾಗಿ ಪಿಎಸ್‌ಐ ತೇಜಸ್ವಿ ಅವರಿಗೂ ಗಾಯಗಳಾಗಿದ್ದು, ಅವರನ್ನು ಹಾಗೂ ಗುಂಡೇಟಿನಿಂದ ಗಾಯಗೊಂಡ ಆರೋಪಿ ರಾಜುನನ್ನು ಚಿಕಿತ್ಸೆಗಾಗಿ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಹರಿರಾಮ್ ಶಂಕರ್ ಅವರು ಆಸ್ಪತ್ರೆಗೆ ಭೇಟಿ ನೀಡಿ, ಗಾಯಾಳು ಪಿಎಸ್‌ಐ ತೇಜಸ್ವಿ ಅವರ ಆರೋಗ್ಯ ವಿಚಾರಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ತನಿಖೆ ಮುಂದುವರಿದಿದೆ.

- Advertisement -

Latest News

error: Content is protected !!