
ವಿಟ್ಲ; ನಿಗೂಢವಾಗಿ ನಾಪತ್ತೆಯಾಗಿದ್ದ ವೃದ್ಧ ಚರಂಡಿಯಲ್ಲಿ ಜೀವನ್ಮರಣ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ವಿಟ್ಲ ಪಡೂರು ಗ್ರಾಮದ ಕುಕ್ಕಿಲ ಎಂಬಲ್ಲಿ ನಡೆದಿದೆ. ಕುಕ್ಕಿಲ ನಿವಾಸಿ ಗಿರಿಯಪ್ಪ ಸಪಲ್ಯ (75) ಎಂಬವರು ಕಳೆದ ಮೂರು ದಿನಗಳಿಂದ ನಿಗೂಢವಾಗಿ ನಾಪತ್ತೆಯಾಗಿದ್ದು, ಶುಕ್ರವಾರ ಬೆಳಿಗ್ಗೆ ಅಡಿಕೆ ತೋಟದ ಚರಂಡಿಯಲ್ಲಿ ಜೀವನ್ಮರಣ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಕಳೆದ ಮಂಗಳವಾರ ವೃದ್ಧ ಕಾಣೆಯಾಗಿದ್ದ ಬಗ್ಗೆ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅಗ್ನಿಶಾಮಕ ದಳ, ವೃದ್ಧರ ಸಂಬಂಧಿಕರು, ಕೋಡಪದವು ‘ಮಾರುತಿ ಫ್ರೆಂಡ್ಸ್’ ಸದಸ್ಯರು ಹಾಗೂ ಸಾರ್ವಜನಿಕರು ಶುಕ್ರವಾರ ಬೆಳಿಗ್ಗೆಯಿಂದಲೇ ವಿವಿಧೆಡೆ ಹುಡುಕಾಟ ಆರಂಭಿಸಿದ್ದರು.
ಈ ವೇಳೆ ಕುಕ್ಕಿಲದ ಅಡಿಕೆ ತೋಟದ ನೀರು ಹರಿಯುವ ಚರಂಡಿಯಲ್ಲಿ ವೃದ್ಧ ಅಸ್ವಸ್ಥರಾಗಿ ಬಿದ್ದಿರುವುದು ಕಂಡುಬಂದಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಸ್ಥಳೀಯರು ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ, ಸಾಮಾಜಿಕ ಕಾರ್ಯಕರ್ತ ಮುರಳಿ ವಿಟ್ಲ ಅವರ ಆಂಬುಲೆನ್ಸ್ ಮೂಲಕ ವಿಟ್ಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಸ್ತುತ ವೃದ್ಧರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.


