
ಬಂಟ್ವಾಳ: ಇತ್ತೀಚೆಗೆ ಬರಿಮಾರು ಗ್ರಾಮದ ಕಲ್ಲೆಟ್ಟಿ ಬಳಿ ಶಾಲಾ ಬಸ್ ಮೇಲೆ ಮರ ಬಿದ್ದು ಬಾಲಕಿ ಮೃತಪಟ್ಟ ದುರಂತದ ಹಿನ್ನೆಲೆಯಲ್ಲಿ, ಅರಣ್ಯ ಇಲಾಖೆ ಬಂಟ್ವಾಳ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಪಾಯಕಾರಿಯಾಗಿ ವಾಲಿದ ಮರಗಳನ್ನು ತೆರವುಗೊಳಿಸಲು ಮುಂದಾಗಿದೆ.
ದುರಂತದ ನಂತರ ಬಿ.ಸಿ. ರೋಡ್ ಸೇರಿದಂತೆ ವಿವಿಧ ಭಾಗಗಳಲ್ಲಿ ರಸ್ತೆಬದಿಯ ಬೃಹತ್ ಮರಗಳಿಂದ ಸಾರ್ವಜನಿಕರು ಹಾಗೂ ವಾಹನ ಸವಾರರು ಆತಂಕದಲ್ಲಿದ್ದರು. ಈ ಕುರಿತು ಮಾಧ್ಯಮಗಳಲ್ಲಿ ವರದಿಗಳು ಪ್ರಕಟವಾಗುತ್ತಿದ್ದಂತೆ ಹೆಚ್ಚೆತ್ತ ಇಲಾಖೆಯ ಮೇಲಧಿಕಾರಿಗಳ ಸೂಚನೆಯಂತೆ ಶನಿವಾರ ಮುಂಜಾನೆ 6 ಗಂಟೆಯಿಂದಲೇ ಸಮರೋಪಾದಿಯಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಯಿತು.
ಬಿ.ಸಿ. ರೋಡ್ KSRTC ಬಸ್ ನಿಲ್ದಾಣದ ಆವರಣ ಹಾಗೂ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ರಸ್ತೆಗೆ ಚಾಚಿಕೊಂಡಿದ್ದ ಬೃಹತ್ ಮರದ ಕೊಂಬೆಗಳನ್ನು ಸಿಬ್ಬಂದಿ ಸ್ಥಳೀಯರ ನೆರವಿನಿಂದ ತೆರವುಗೊಳಿಸಿದರು. ಕಾರ್ಯಾಚರಣೆಯ ಸುರಕ್ಷತೆಯ ದೃಷ್ಟಿಯಿಂದ ಸಂಚಯಗಿರಿ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ತಾತ್ಕಾಲಿಕವಾಗಿ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಲಾಗಿತ್ತು. ಇಲಾಖೆಯ ಈ ತ್ವರಿತ ಕ್ರಮವನ್ನು ಸ್ವಾಗತಿಸಿರುವ ಸ್ಥಳೀಯರು, ತಾಲೂಕಿನಾದ್ಯಂತ ಇರುವ ಇತರ ಅಪಾಯಕಾರಿ ಮರಗಳನ್ನೂ ಗುರುತಿಸಿ ತಕ್ಷಣ ತೆರವುಗೊಳಿಸಬೇಕೆಂದು ಆಗ್ರಹಿಸಿದ್ದಾರೆ.


