
ಹಾಸನ: ಜಿಲ್ಲೆಯ ದೊಡ್ಡಪುರ ಗ್ರಾಮದ ಬಳಿ ಬಿಯರ್ ಸಾಗಿಸುತ್ತಿದ್ದ ಲಾರಿಯೊಂದು ಪಲ್ಟಿಯಾಗಿದ್ದು, ಸುಮಾರು 15 ಲಕ್ಷ ರೂಪಾಯಿ ಮೌಲ್ಯದ ಮದ್ಯ ರಸ್ತೆಪಾಲಾದ ಘಟನೆ ನಡೆದಿದೆ.
ಹಾಸನ ನಗರದ ಕೈಗಾರಿಕಾ ಪ್ರದೇಶದಲ್ಲಿರುವ ‘ವುಡ್ ಪಿಕರ್’ ಕಂಪನಿಯಿಂದ 1,100 ಬಾಕ್ಸ್ ಬಿಯರ್ ಹೊತ್ತು ಕೊಪ್ಪಳದತ್ತ ತೆರಳುತ್ತಿದ್ದ ಲಾರಿ, ದೊಡ್ಡಪುರ ಗ್ರಾಮದ ಬಳಿ ತಲುಪುತ್ತಿದ್ದಂತೆ ಮುಂಭಾಗದ ಟೈಯರ್ ಬ್ಲಾಸ್ಟ್ ಆಗಿದೆ. ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದ ಲಾರಿ ರಸ್ತೆ ಡಿವೈಡರ್ ಮೇಲೆ ಹತ್ತಿ ಪಲ್ಟಿಯಾಗಿದೆ.
ಅಪಘಾತದ ಭರಕ್ಕೆ ಲಾರಿಯಲ್ಲಿದ್ದ ಲೆಜೆಂಡ್, ರಾಯಲ್, ಪವರ್ ಕೂಲ್ ಹಾಗೂ ಸನ್ನಿ ಬೀಚಸ್ ಕಂಪನಿಯ ಬಿಯರ್ ಬಾಟಲಿಗಳು ಮತ್ತು ಟಿನ್‌ಗಳು ರಸ್ತೆಯುದ್ದಕ್ಕೂ ಬಿದ್ದು ಒಡೆದು ಹೋಗಿವೆ. ಘಟನೆಯಿಂದಾಗಿ ರಸ್ತೆಯ ಒಂದು ಬದಿಯ ವಾಹನ ಸಂಚಾರ ಸಂಪೂರ್ಣವಾಗಿ ಬಂದ್ ಆಗಿತ್ತು.
ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ ಹಾಸನ ಗ್ರಾಮಾಂತರ ಠಾಣೆ ಪೊಲೀಸರು, ಪರಿಶೀಲನೆ ನಡೆಸಿ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಿದ್ದಾರೆ.


