
ಮಂಗಳೂರು: ನೀಟ್ ಪರೀಕ್ಷೆಯ ಅಕ್ರಮಗಳನ್ನು ಪ್ರಶ್ನಿಸುವ ಹಕ್ಕು ವಿಪಕ್ಷಗಳಿಗಿದೆ ಹಾಗೂ ವಿದ್ಯಾರ್ಥಿಗಳ ಬೇಡಿಕೆಗೆ ವಿಪಕ್ಷಗಳು ಬೆಂಬಲವಾಗಿ ನಿಂತಿವೆ ಎಂದು ಮಾಜಿ ಸಚಿವ ಬಿ. ರಮಾನಾಥ್ ರೈ ಹೇಳಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಭಟನಾನಿರತ ವಿದ್ಯಾರ್ಥಿಗಳು ಹಾಗೂ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿಯವರೊಂದಿಗೆ ಆಡಳಿತ ಪಕ್ಷ ನಡೆದುಕೊಂಡ ರೀತಿ ತೀವ್ರ ಖಂಡನೀಯ ಎಂದಿದ್ದಾರೆ.
ಅಕ್ರಮವನ್ನು ಪ್ರಶ್ನಿಸಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳ ಮೇಲಿನ ಹಲ್ಲೆಗೆ ಸಹಾನುಭೂತಿ ವ್ಯಕ್ತಪಡಿಸುವುದನ್ನು ಬಿಟ್ಟು, ಧರಣಿ ಕೂತವರನ್ನು ಅಪಹಾಸ್ಯ ಮಾಡುವುದು ಮತ್ತು ಅವರನ್ನು ದೇಶದ್ರೋಹಿಗಳಂತೆ ಬಿಂಬಿಸುವುದು ಆಡಳಿತ ಪಕ್ಷಕ್ಕೆ ಶೋಭೆ ತರುವುದಿಲ್ಲ ಎಂದು ರೈ ಆಕ್ರೋಶ ವ್ಯಕ್ತಪಡಿಸಿದರು. ಪ್ರಶ್ನೆಪತ್ರಿಕೆ ಸೋರಿಕೆಯಿಂದಾಗಿ 21 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದನ್ನು ಆಡಳಿತಗಾರರು ಅರಿಯಬೇಕಿದೆ. ಈ ಹಗರಣ ಮತ್ತು ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯದ ಕುರಿತು ಪ್ರತಿಯೊಬ್ಬ ನಾಗರಿಕನೂ ಚರ್ಚೆ ನಡೆಸಬೇಕಾದ ಅಗತ್ಯವಿದೆ ಎಂದು ಅವರು ಹೇಳಿದರು.
ಇದೇ ವೇಳೆ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಹಿಂದೆ ಬೋಫೋರ್ಸ್ ಪ್ರಕರಣ ಬಂದಾಗ ಅಂದಿನ ಡಾ. ಮನಮೋಹನ್ ಸಿಂಗ್ ಸರ್ಕಾರ ಜಂಟಿ ಸಂಸದೀಯ ಸಮಿತಿ (JPC) ರಚಿಸಿ ತನಿಖೆಗೆ ಕ್ರಮ ವಹಿಸಿತ್ತು. ಆದರೆ ಪ್ರಸ್ತುತ ಸರ್ಕಾರ ಯುದ್ಧ ವಿಮಾನ ಹಗರಣ ಸೇರಿದಂತೆ ಪ್ರಮುಖ ವಿಷಯಗಳಲ್ಲಿ ಜೆಪಿಸಿ ತನಿಖೆಗೆ ಒಪ್ಪುತ್ತಿಲ್ಲ. ಇದರಿಂದ ಹಾಲಿ ಸರ್ಕಾರಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ನಂಬಿಕೆಯಿಲ್ಲ ಎಂಬುದು ಸ್ಪಷ್ಟವಾಗುತ್ತದೆ ಎಂದು ಆರೋಪಿಸಿದರು. ಈ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಶಶಿಧರ ಹೆಗ್ಡೆ, ಬೇಬಿ ಕುಂದರ್, ಶಾಹುಲ್ ಹಮೀದ್, ಪೃಥ್ವಿರಾಜ್, ವಿಕಾಸ್ ಶೆಟ್ಟಿ, ಪ್ರಕಾಶ್ ಸಾಲ್ಯಾನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.


