
ಹೊನ್ನಾವರ ತಾಲೂಕಿನ ಕಾಸರಕೋಡ ಟೊಂಕಾ ಬಂದರಿನಲ್ಲಿ ನಿಲ್ಲಿಸಲಾಗಿದ್ದ ಮೀನುಗಾರಿಕಾ ಬೋಟ್ ಒಂದರಲ್ಲಿ, ವೆಲ್ಡಿಂಗ್ ಕೆಲಸ ಮಾಡುವಾಗ ಆಕಸ್ಮಿಕವಾಗಿ ಬೆಂಕಿ ತಗುಲಿ ಬೋಟ್ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿರುವ ಘಟನೆ ಜುಲೈ 21 ಮಂಗಳವಾರದಂದು ನಡೆದಿದೆ.
ಪ್ರಸ್ತುತ ಆಳ ಸಮುದ್ರ ಮೀನುಗಾರಿಕೆಗೆ ನಿಷೇಧವಿರುವುದರಿಂದ ಬಂದರಿನಲ್ಲಿ ಬೋಟ್ಗಳ ದುರಸ್ತಿ ಹಾಗೂ ನಿರ್ವಹಣಾ ಕಾರ್ಯಗಳು ಭರದಿಂದ ಸಾಗುತ್ತಿದ್ದವು. ಈ ವೇಳೆ ಕಾಸರಗೋಡು ಟೊಂಕಾ ನಿವಾಸಿ ಶಕೀರಾ ಅಯೂಬ್ ಸಾಬ್ ಅವರಿಗೆ ಸೇರಿದ ‘ಪಶ್ಚಿಯನ್’ ಬೋಟ್ನಲ್ಲಿ ವೆಲ್ಡಿಂಗ್ ಕೆಲಸ ನಡೆಸುತ್ತಿದ್ದಾಗ, ಕಿಡಿಗಳು ಬೋಟ್ನ ತಳಭಾಗಕ್ಕೆ ಬಿದ್ದು ನೋಡನೋಡುತ್ತಿದ್ದಂತೆ ಬೆಂಕಿ ತೀವ್ರವಾಗಿ ಆವರಿಸಿದೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಸ್ಥಳೀಯ ಮೀನುಗಾರರು ನಂದಿಸಲು ಯತ್ನಿಸಿದ್ದು, ತಕ್ಷಣವೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ಸಂಪೂರ್ಣವಾಗಿ ಶಮನಗೊಳಿಸಿದ್ದಾರೆ.
ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲವಾದರೂ ಬೋಟ್ಗೆ ಅಪಾರ ಪ್ರಮಾಣದ ಹಾನಿಯಾಗಿದೆ. ಘಟನಾ ಸ್ಥಳಕ್ಕೆ ಕರಾವಳಿ ಕಾವಲು ಪಡೆಯ (ಕೋಸ್ಟ್ ಗಾರ್ಡ್) ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ


