
ಬೆಂಗಳೂರು ಮೆಟ್ರೋ ರೈಲು ಹಾಗೂ ನಿಲ್ದಾಣಗಳಲ್ಲಿ ಸುರಕ್ಷತೆ ಮತ್ತು ಸಾರ್ವಜನಿಕ ಶಿಸ್ತನ್ನು ಕಾಪಾಡುವ ನಿಟ್ಟಿನಲ್ಲಿ, ಬೆಂಗಳೂರು ಮೆಟ್ರೋ ರೈಲು ನಿಗಮವು (BMRCL) ಕೇಂದ್ರ ಸರ್ಕಾರದ ಮಾರ್ಗಸೂಚಿಯ ಅನ್ವಯ ಹೊಸ ಪರಿಷ್ಕೃತ ದಂಡದ ನಿಯಮಾವಳಿಗಳನ್ನು ಜಾರಿಗೊಳಿಸಿದೆ.
ಮೆಟ್ರೋ ಪ್ರಯಾಣವನ್ನು ಮತ್ತಷ್ಟು ಸುರಕ್ಷಿತ ಹಾಗೂ ಪ್ರಯಾಣಿಕ ಸ್ನೇಹಿಯಾಗಿಸುವ ಉದ್ದೇಶದಿಂದ ಜಾರಿಗೆ ತರಲಾಗಿರುವ ಈ ಕಟ್ಟುನಿಟ್ಟಿನ ನಿಯಮಗಳ ಪ್ರಕಾರ, ವಿಧಿವಿಲ್ಲದೆ ನಿಯಮ ಉಲ್ಲಂಘಿಸುವ ಸವಾರರಿಗೆ ಇನ್ಮುಂದೆ ಕನಿಷ್ಠ ₹2,500 ದಿಂದ ಗರಿಷ್ಠ ₹25,000 ವರೆಗೆ ಭಾರಿ ದಂಡ ವಿಧಿಸಲು ಬಿಎಂಆರ್‌ಸಿಎಲ್ ಮುಂದಾಗಿದೆ.
ಈ ಹೊಸ ನಿಯಮಾವಳಿಗಳ ಪ್ರಕಾರ, ಅತ್ಯಂತ ಗಂಭೀರ ಅಪರಾಧಗಳಾದ ಮೆಟ್ರೋ ಹಳಿಗಳ (ಟ್ರ್ಯಾಕ್) ಮೇಲೆ ಅನಧಿಕೃತವಾಗಿ ಪ್ರವೇಶಿಸುವುದು, ಓಡಾಡುವುದು, ಜಿಗಿಯುವುದು ಅಥವಾ ಟಿಕೆಟ್ ಮತ್ತು ಸ್ಮಾರ್ಟ್ ಕಾರ್ಡ್‌ಗಳನ್ನು ದುರ್ಬಳಕೆ ಮಾಡಿಕೊಳ್ಳುವುದಕ್ಕೆ ಕನಿಷ್ಠ ₹5,000 ದಿಂದ ಗರಿಷ್ಠ ₹25,000 ವರೆಗೆ ದಂಡ ವಿಧಿಸಲಾಗುತ್ತದೆ. ನಿಲ್ದಾಣಗಳ ಗೋಡೆಗಳ ಮೇಲೆ ಗೀಚುವುದು, ಚಿತ್ರ ಬರೆಯುವುದು ಅಥವಾ ಅನಧಿಕೃತವಾಗಿ ಪೋಸ್ಟರ್‌ಗಳನ್ನು ಅಂಟಿಸಿ ಮೆಟ್ರೋ ಸೌಂದರ್ಯಕ್ಕೆ ಧಕ್ಕೆ ತಂದರೆ ₹10,000 ದಂಡ ತೆರಬೇಕಾಗುತ್ತದೆ. ಇನ್ನು ಇತ್ತೀಚೆಗೆ ಮೆಟ್ರೋದಲ್ಲಿ ಹೆಚ್ಚಾಗಿರುವ ರೀಲ್ಸ್ ಹಾವಳಿ, ಜೋರಾಗಿ ಹಾಡು ಕೇಳುವುದು, ನೆಲದ ಮೇಲೆ ಕುಳಿತುಕೊಳ್ಳುವುದು ಮತ್ತು ಆಹಾರ ಸೇವಿಸುವುದಕ್ಕೆ ಬ್ರೇಕ್ ಹಾಕಲಾಗಿದ್ದು, ಈ ಹಿಂದೆ ಇದ್ದ ₹500 ದಂಡವನ್ನು ಈಗ ₹2,500 ರಿಂದ ₹10,000 ವರೆಗೆ ಭಾರಿ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ.
ಇದರ ಜೊತೆಗೆ ಮೆಟ್ರೋ ಆವರಣದಲ್ಲಿ ಅನುಮತಿ ಇಲ್ಲದೆ ವ್ಯಾಪಾರಕ್ಕಿಳಿದರೆ ₹5,000 ದಂಡ ವಿಧಿಸಲಾಗುತ್ತದೆ. ಹಾಗೆಯೇ ಮದ್ಯಪಾನ ಮಾಡಿ ಪ್ರಯಾಣಿಸುವುದು, ಅಸಭ್ಯ ವರ್ತನೆ ತೋರುವುದು, ಸಹಪ್ರಯಾಣಿಕರೊಂದಿಗೆ ಜಗಳವಾಡುವುದು, ನಿಲ್ದಾಣಗಳಲ್ಲಿ ಉಗುಳುವುದು ಹಾಗೂ ಪಟಾಕಿ, ಸ್ಫೋಟಕ ಅಥವಾ ಅಪಾಯಕಾರಿ ರಾಸಾಯನಿಕಗಳನ್ನು ಸಾಗಿಸುವ ಕೃತ್ಯಗಳಿಗೆ ತಲಾ ₹2,500 ದಂಡ ನಿಗದಿಪಡಿಸಲಾಗಿದೆ. ಈ ಪರಿಷ್ಕೃತ ನಿಯಮಾವಳಿಯ ಮತ್ತೊಂದು ಕಠಿಣ ನಿಯಮವೆಂದರೆ, ಈಗ ಜಾರಿಗೆ ತಂದಿರುವ ಎಲ್ಲಾ ದಂಡದ ಮೊತ್ತವನ್ನು ಪ್ರತಿ 3 ವರ್ಷಗಳಿಗೊಮ್ಮೆ ಶೇ.10 ರಷ್ಟು ಸ್ವಯಂಚಾಲಿತವಾಗಿ ಹೆಚ್ಚಿಸಲಾಗುತ್ತದೆ ಎಂದು ಬಿಎಂಆರ್‌ಸಿಎಲ್ ಸ್ಪಷ್ಟಪಡಿಸಿದೆ.


