
ಬೆಂಗಳೂರಿನಲ್ಲಿ ಬಸ್ ಹಾಗೂ ರೈಲುಗಳಲ್ಲಿ ಕಳ್ಳಿಯರ ಹಾವಳಿ ಮಿತಿಮೀರುತ್ತಿದ್ದು, ಡಿಜಿಟಲ್ ಪೇಮೆಂಟ್ ಕಾಲದಲ್ಲಿ ಪ್ರಯಾಣಿಕರ ಪರ್ಸ್ ಹೊಡೆದರೆ ಲಾಭವಿಲ್ಲ ಎಂದು ಯೋಚಿಸಿದ ತಮಿಳುನಾಡು ಮೂಲದ ಕಿಲಾಡಿ ಮಹಿಳೆಯೊಬ್ಬಳು, ನೇರವಾಗಿ ಬಿಎಂಟಿಸಿ ಬಸ್ ಕಂಡಕ್ಟರ್ ಬ್ಯಾಗ್ ಅನ್ನೇ ಎಗರಿಸಿ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ಘಟನೆ ನಡೆದಿದೆ.
ನಡೆದಿದ್ದೇನು?: ಬಿಎಂಟಿಸಿ ಬಸ್ ಸಂಖ್ಯೆ KA-57 F 6331 ರಲ್ಲಿ ವಿಪರೀತ ರಶ್ ಇದ್ದಿದ್ದನ್ನು ಬಳಸಿಕೊಂಡು ಬಸ್ ಹತ್ತಿದ ಈ ಮಹಿಳೆ, ಅತ್ಯಂತ ಚಾಣಾಕ್ಷತನದಿಂದ ಕಂಡಕ್ಟರ್ ಬ್ಯಾಗ್ ಅನ್ನು ಕದ್ದಿದ್ದಾಳೆ. ಯಾರಿಗೂ ಸಂಶಯ ಬಾರದಂತೆ ಆ ಬ್ಯಾಗ್ ಹಾಗೂ ಟಿಕೆಟ್ಗಳನ್ನು ತಾನು ತಂದಿದ್ದ ಬ್ಯಾಗ್ ಒಳಗೆ ಅಡಗಿಸಿಟ್ಟುಕೊಂಡಿದ್ದಾಳೆ. ಆದರೆ ಬಸ್ನ ಸಿಸಿಟಿವಿ ಕ್ಯಾಮೆರಾದಲ್ಲಿ ಈಕೆಯ ಕೈಚಳಕ ರೆಕಾರ್ಡ್ ಆಗುತ್ತಿರುವುದು ಆಕೆಗೆ ತಿಳಿದಿರಲಿಲ್ಲ.
ಸಿಕ್ಕಿಬಿದ್ದಿದ್ದು ಹೇಗೆ?: ಮುಂದಿನ ಸ್ಟಾಪ್ ಬರುತ್ತಿದ್ದಂತೆ ಬಸ್ಸಿನಿಂದ ಇಳಿದು ಎಸ್ಕೇಪ್ ಆಗಲು ಕಳ್ಳಿ ಸಜ್ಜಾಗಿದ್ದಳು. ಆದರೆ ಅಷ್ಟರಲ್ಲೇ ತನ್ನ ಬ್ಯಾಗ್ ಕಳವಾಗಿರುವುದನ್ನು ಗಮನಿಸಿದ ಕಂಡಕ್ಟರ್ ತಕ್ಷಣವೇ ಚಾಲಕನಿಗೆ ಹೇಳಿ ಬಸ್ನ ಸ್ವಯಂಚಾಲಿತ ಬಾಗಿಲುಗಳನ್ನು ಬಂದ್ ಮಾಡಿಸಿದ್ದಾರೆ. ಇದರಿಂದ ಗಾಬರಿಗೊಂಡ ಮಹಿಳೆ, ತಾನೇನೂ ತಪ್ಪು ಮಾಡದ ಅಮಾಯಕಿಯಂತೆ ನಟಿಸುತ್ತಾ ಬಾಗಿಲು ತೆರೆಯುವಂತೆ ಡ್ರೈವರ್ ಬಳಿ ಅಂಗಲಾಚಿದ್ದಾಳೆ.
ಕಂಡಕ್ಟರ್ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿ ಮಹಿಳಾ ಅಧಿಕಾರಿಯನ್ನು ಸ್ಥಳಕ್ಕೆ ಕರೆಸಿದ್ದಾರೆ. ಬಳಿಕ ಮಹಿಳೆಯ ಬ್ಯಾಗ್ ತಪಾಸಣೆ ನಡೆಸಿದಾಗ ಅದರೊಳಗೆ ಕಂಡಕ್ಟರ್ ಬ್ಯಾಗ್ ಪತ್ತೆಯಾಗಿದೆ. ಆದರೆ ಬ್ಯಾಗ್ನಲ್ಲಿದ್ದ ಹಣ ಮಾತ್ರ ನಾಪತ್ತೆಯಾಗಿದ್ದು, ಪೊಲೀಸರು ಆರೋಪಿ ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಘಟನೆಯ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.


