
ಮಂಗಳೂರು, ಜುಲೈ 6: ನಗರದ ಬೈಕಂಪಾಡಿ ಬಳಿ ನಡೆದ ಮಹಾರಾಷ್ಟ್ರ ಮೂಲದ ಚಿನ್ನದ ವ್ಯಾಪಾರಿಯ ದರೋಡೆ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಮಂಗಳೂರು ಪೊಲೀಸರು, ತಲೆಮರೆಸಿಕೊಂಡಿರುವ 13 ಪ್ರಮುಖ ಆರೋಪಿಗಳ ಛಾಯಾಚಿತ್ರಗಳನ್ನು ಬಿಡುಗಡೆ ಮಾಡಿದ್ದಾರೆ. ಆರೋಪಿಗಳ ಪತ್ತೆಗೆ ಸಾರ್ವಜನಿಕರ ಸಹಾಯ ಕೋರಲಾಗಿದ್ದು, ಸುಳಿವು ನೀಡಿದವರಿಗೆ ಸೂಕ್ತ ಬಹುಮಾನ ಘೋಷಿಸಲಾಗಿದೆ.
ಘಟನೆಯ ಹಿನ್ನೆಲೆ: ಜೂನ್ 29ರ ಮುಂಜಾನೆ ಮಹಾರಾಷ್ಟ್ರದ ಚಿನ್ನದ ವ್ಯಾಪಾರಿ ವಿಕಾಸ್ ಎಂಬುವವರು ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ, ಬೈಕಂಪಾಡಿ ಬಳಿ ಗ್ಯಾಂಗ್ ಒಂದು ವಾಹನವನ್ನು ಅಡ್ಡಗಟ್ಟಿತ್ತು. ಕಾರಿನಲ್ಲಿದ್ದ ಸುಮಾರು 23 ಲಕ್ಷ ರೂ. ಮೌಲ್ಯದ 180 ಗ್ರಾಂ ಚಿನ್ನ ಹಾಗೂ ಇತರ ಬೆಲೆಬಾಳುವ ವಸ್ತುಗಳನ್ನು ದೋಚಿ ದರೋಡೆಕೋರರು ಪರಾರಿಯಾಗಿದ್ದರು. ಈ ಘಟನೆ ಕರಾವಳಿ ಜಿಲ್ಲೆಯಲ್ಲಿ ಭಾರಿ ಕೋಲಾಹಲ ಸೃಷ್ಟಿಸಿತ್ತು.
ಪುದುಚೇರಿ ಮೂಲದ ಮಾಸ್ಟರ್ ಮೈಂಡ್: ಪೊಲೀಸ್ ತನಿಖೆಯ ಪ್ರಕಾರ, ಈ ಇಡೀ ದರೋಡೆಯ ಸಂಚಿನ ಹಿಂದೆ ಪುದುಚೇರಿ ಮೂಲದ ಶಿಬಿನ್ ಗಂಗಾಧರನ್ ಎಂಬಾತ ಮಾಸ್ಟರ್ ಮೈಂಡ್ ಆಗಿ ಕೆಲಸ ಮಾಡಿದ್ದಾನೆ. ಆತನ ಪೋಟೋ ಸೇರಿದಂತೆ ಒಟ್ಟು 13 ಪ್ರಮುಖ ಆರೋಪಿಗಳ ಲುಕೌಟ್ ನೋಟಿಸ್ ಮಾದರಿಯ ಪೋಸ್ಟರ್ಗಳನ್ನು ಪೊಲೀಸರು ಪ್ರಕಟಿಸಿದ್ದಾರೆ.
ಆರೋಪಿಗಳ ವಿವರ: ಪೊಲೀಸರು ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಶಿಬಿನ್ ಗಂಗಾಧರನ್, ಶ್ರೀರಾಗ್, ಅತುಲ್, ಮಿಥುನ್ ಲಾಲ್, ಅಜೀರ್ ತರಯಿಲ್, ವೈಶಾಖ್, ಅಸೀರ್ ಪಯ್ಯನೂರು, ಪ್ರಣವ್, ವಿಜಿಲ್, ಉಬೈದ್ (ಕೊಡಗು), ಫಿರೋಜ್, ಮೊಯ್ದು ಅಬ್ಬಾಸ್, ಜಿಯಾದ್ ಮತ್ತು ಜಮೀರ್ ಅಲಿಕಾ ಸೇರಿದ್ದಾರೆ. ಈ ಆರೋಪಿಗಳ ಪೋಸ್ಟರ್ಗಳನ್ನು ಕರ್ನಾಟಕ ಮತ್ತು ಕೇರಳದಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶಿಸಲು ಕ್ರಮ ಕೈಗೊಳ್ಳಲಾಗಿದೆ.
ಮೂವರ ಬಂಧನ, ವಿಚಾರಣೆ ತೀವ್ರ: ಪ್ರಕರಣಕ್ಕೆ ಸಂಬಂಧಿಸಿದಂತೆ ಪಣಂಬೂರು ಪೊಲೀಸರು ಈಗಾಗಲೇ ದರೋಡೆಕೋರರಿಗೆ ಆಶ್ರಯ ಹಾಗೂ ಸಹಾಯ ನೀಡಿದ ಆರೋಪದ ಮೇಲೆ ಮೂವರನ್ನು ಬಂಧಿಸಿದ್ದಾರೆ. ಕೇರಳದ ನಿಮಿಲ್, ಮಡಿಕೇರಿಯ ಇರ್ಷಾದ್ ಮತ್ತು ಮುಸ್ತಫಾ ಬಂಧಿತರಾಗಿದ್ದು, ಸದ್ಯ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.
ಮಾಹಿತಿ ನೀಡಿದವರ ಗುರುತು ಗೌಪ್ಯ: “ದರೋಡೆಕೋರರ ಬಗ್ಗೆ ಯಾವುದೇ ಮಾಹಿತಿ ಇದ್ದಲ್ಲಿ ಸಾರ್ವಜನಿಕರು ತಕ್ಷಣ 100 ಕ್ಕೆ ಕರೆ ಮಾಡಿ ಅಥವಾ ಹತ್ತಿರದ ಪೊಲೀಸ್ ಠಾಣೆಗೆ ಧಾವಿಸಿ ಮಾಹಿತಿ ನೀಡಬೇಕು. ಮಾಹಿತಿ ನೀಡುವ ಸಾರ್ವಜನಿಕರ ಗುರುತನ್ನು ಸಂಪೂರ್ಣ ಗೌಪ್ಯವಾಗಿಡಲಾಗುವುದು ಹಾಗೂ ಅವರಿಗೆ ವಿಶ್ವಾಸಾರ್ಹ ಮಾಹಿತಿಗಾಗಿ ಸೂಕ್ತ ನಗದು ಬಹುಮಾನ ನೀಡಲಾಗುವುದು” ಎಂದು ಮಂಗಳೂರು ಪೊಲೀಸ್ ಪ್ರಕಟಣೆ ತಿಳಿಸಿದೆ.


