
ಬಂಟ್ವಾಳ: ಸಾರ್ವಜನಿಕ ಸ್ಥಳದಲ್ಲಿ ಮಾದಕ ವಸ್ತು ಸೇವಿಸಿ ಅನುಚಿತವಾಗಿ ವರ್ತಿಸುತ್ತಿದ್ದ ಇಬ್ಬರನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ರಕೀಝ್ ಹಾಗೂ ಅಬ್ದುಲ್ ರಫತ್ ಬಂಧಿತರು.
ಆರೋಪಿಗಳು ಬಂಟ್ವಾಳ ತಾಲೂಕು ಪುದು ಗ್ರಾಮದ 10ನೇ ಮೈಲುಕಲ್ಲು ಸಮೀಪದ ಸುಜೀರು ಹೊಳೆ ಬದಿಯ ಸಾರ್ವಜನಿಕ ಸ್ಥಳದಲ್ಲಿ ಮಾದಕ ವಸ್ತು ಸೇವಿಸಿ ನಶೆಯಲ್ಲಿದ್ದಂತೆ ಅಸಭ್ಯವಾಗಿ ವರ್ತಿಸಿ ಸಾರ್ವಜನಿಕರಿಗೆ ತೊಂದರೆ ಉಂಟುಮಾಡುತ್ತಿದ್ದರು. ಈ ಬಗ್ಗೆ ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯ ಆಧಾರದ ಮೇಲೆ ಸ್ಥಳಕ್ಕೆ ದೌಡಾಯಿಸಿದ ಸಿಬ್ಬಂದಿ ಇಬ್ಬರು ತಕ್ಷಣ ವಶಕ್ಕೆ ಪಡೆದಿದ್ದಾರೆ. ಬಳಿಕ ಅವರನ್ನು ಬಂಟ್ವಾಳ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಯಿತು.
ತಪಾಸಣೆಯಲ್ಲಿ ಇಬ್ಬರೂ ಮಾದಕ ವಸ್ತು ಸೇವಿಸಿರುವುದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.


